ಬೆಳಗಾವಿ: ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿರುವ ರಾಜ್ಯದ ಅತಿದೊಡ್ಡ ಸಹಕಾರಿ ಸಂಸ್ಥೆ ಬೆಳಗಾವಿಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇಂದು ನಡೆಯಲಿದ್ದು, ಅಭ್ಯರ್ಥಿಗಳ ಆಧಿಕೃತ ಘೋಷಣೆ ಕೆಲವೇ ಕ್ಷಣಗಳಲ್ಲಿ ನಡೆಯಲಿದೆ.
ಬಿಜೆಪಿ ಅಭ್ಯರ್ಥಿ ಕುರಿತಂತೆ ಕಳೆದ ಒಂದು ವಾರದಿಂದ ಚರ್ಚೆ, ಮಾತುಕತೆ ಹಾಗೂ ರಹಸ್ಯ ತಂತ್ರಗಳು ನಡೆಯುತ್ತಿದ್ದರೂ ಇದುವರೆಗೂ ಅಧಿಕೃತ ಅಭ್ಯರ್ಥಿಗಳ ಘೋಷಣೆಯಾಗಿಲ್ಲ.
ಬೆಳಗಾವಿ ಸಾಹುಕಾರ ಸಚಿವ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ತಮ್ಮ ಬೆಂಬಲಿಗರನ್ನೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತರಲು ತೀವ್ರ ಕಸರತ್ತು ನಡೆಸಿದ್ದಾರೆ.
ಕಳೆದ ರಾತ್ರಿ ಸುಧೀರ್ಘ ಸಭೆ ನಡೆಸಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲು ತೀರ್ಮಾನಿಸಲಾಯಿತಾದರೂ ಯಾರು ಎಂಬ ತೀರ್ಮಾನಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ.

16 ನಿರ್ದೇಶಕರ ಬಲ ಹೊಂದಿರುವ ಬೆಳಗಾವಿ ಡಿಸಿಸಿ ಬ್ಯಾಂಕ್‍ನಲ್ಲಿ 13 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 3 ಸ್ಥಾನಗಳಿಗೆ ನಡೆದ ಚುನಾವಣೆ ಬಳಿಕ ಬೆಳಗಾವಿಯ ಬಿಜೆಪಿ ನಾಯಕರ ನಡುವಿನ ಒಗ್ಗಟ್ಟು ಉಳಿದಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಚಿಕ್ಕೋಡಿಯಿಂದ ಎಂಪಿ ಚುನಾವಣೆಗೆ ಟಿಕೆಟ್‍ಗಾಗಿ ಪಟ್ಟು ಹಿಡಿದು ಸೋತಿದ್ದ ಉಮೇಶ್ ಕತ್ತಿ ಕುಟುಂಬಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು ಎಂಬ ತೀರ್ಮಾನ ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ತೀರ್ಮಾನವಾಗಿತ್ತು. ಆದರೆ, ಕೆಲ ಕಾರಣಗಳನ್ನು ಮುಂದಿಟ್ಟುಕೊಂಡು ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ನೀಡಲು ಬಿಜೆಪಿ ನಾಯಕರೇ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.
ಬ್ರಹ್ಮ, ವಿಷ್ಣು, ಮಹೇಶ್ವರ ಇದ್ದರೂ, ಸೂರ್ಯ, ಚಂದ್ರ ಮತ್ತು ಅಗ್ನಿ ದೇವರ ಅನುಮತಿ ಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳುತ್ತಿದ್ದರೆ, ಯಾವುದೇ ಗೊಂದಲ ಇಲ್ಲ ಎನ್ನುತ್ತಾರೆ ಉಮೇಶ್ ಕತ್ತಿ.
ಹೀಗಾಗಿ ಬೆಳಗಾವಿ ಡಿಸಿಸಿ ಬ್ಯಾಂಕ್ ಗಾದಿಯ ಕುತೂಹಲಕ್ಕೆ ಕೆಲವೇ ಹೊತ್ತಲ್ಲೇ ಉತ್ತರ ಸಿಗಲಿದ್ದು, ಯಾರಿಗೆ ಒಲಿಯಲಿದೆ ಪಟ್ಟ ಒಲಿಯಲಿದೆ ಎಂದು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








