ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಚಾಕು ಇರಿದ ಆರೋಪವೊಂದು ಕೇಳಿ ಬಂದಿದೆ.
ನಗರದ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮದುವೆ ಆಗುವುದಾಗಿ ನಂಬಿಸಿದ್ದ ಟೆಕ್ಕಿ ಆದಿತ್ಯ ಸಿಂಗ್ ಎಂಬಾತ ಯುವತಿಗೆ ವಂಚಿಸಿದ್ದಾನೆ ಎನ್ನಲಾಗಿದೆ. 27 ವರ್ಷದ ಯುವತಿ ಹಾಗೂ ಯುವಕ ಜಿಮ್ ನಲ್ಲಿ ಪರಿಚಯವಾಗಿದ್ದಾರೆ. ನಂತರ ಇಬ್ಬರೂ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದಾರೆ.
ಇತ್ತೀಚೆಗೆ ಮದುವೆಯಾಗುವಂತೆ ಯುವತಿ ಕೇಳಿದ್ದಾಳೆ. ಇದಕ್ಕೆ ನಿರಾಕರಿಸಿದ ಸಿಂಗ್, ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಗೋಡೆಗೆ ತಲೆ ಚಚ್ಚಿದ್ದಾನೆ ಎಂದು ಯುವತಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.