ಐಸಿಎಸ್ ಉಗ್ರರೊಂದಿಗೆ ನಂಟು ಹೊಂದಿದ್ದ ಬೆಂಗಳೂರಿನ ನೇತ್ರಶಾಸ್ತ್ರಜ್ಞನ ಬಂಧನ
ಬೆಂಗಳೂರು, ಅಗಸ್ಟ್ 19: ನಿಷೇಧಿತ ಭಯೋತ್ಪಾದಕ ಸಂಘಟನೆ ಐಎಸ್‌ಕೆಪಿ (ಇಸ್ಲಾಮಿಕ್ ಸ್ಟೇಟ್ ಆಫ್ ಖೋರಾಸನ್ ಪ್ರಾವಿನ್ಸ್) ಯ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಬೆಂಗಳೂರು ಮೂಲದ ನೇತ್ರಶಾಸ್ತ್ರಜ್ಞನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಐಎಸ್‌ಕೆಪಿ ಭಯೋತ್ಪಾದಕ ಸಂಘಟನೆಯು ಐಸಿಸ್‌ನ ಒಂದು ಭಾಗವಾಗಿದ್ದು ಅದು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಕ್ರಿಯವಾಗಿದೆ. ಆರೋಪಿಯನ್ನು ಅಬ್ದುರ್ ರಹಮಾನ್ ಎಂದು ಗುರುತಿಸಲಾಗಿದ್ದು, ಈತ ಬಸವನಗುಡಿ ನಿವಾಸಿಯಾಗಿದ್ದು, ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ.

ಘರ್ಷಣೆಯಲ್ಲಿ ಗಾಯಗೊಂಡ ಐಸಿಸ್ ಉಗ್ರರಿಗೆ ಸಹಾಯ ಮಾಡಲು ಅಬ್ದುರ್ ರಹಮಾನ್ ಮೆಡಿಕಲ್ ಮೊಬೈಲ್ ಅಪ್ಲಿಕೇಷನ್ ತಯಾರಿಸುತ್ತಿದ್ದ ಮತ್ತು ಐಸಿಸ್ ಹೋರಾಟಗಾರರ ಅನುಕೂಲಕ್ಕಾಗಿ ಶಸ್ತ್ರಾಸ್ತ್ರ-ಸಂಬಂಧಿತ ಅಪ್ಲಿಕೇಷನ್ ಅನ್ನು ಸಹ 28 ವರ್ಷ ವಯಸ್ಸಿನ ರಹಮಾನ್ ಅಭಿವೃದ್ಧಿಪಡಿಸುತ್ತಿದ್ದ.
ಐಸಿಸ್ ಭಯೋತ್ಪಾದಕರ ಚಿಕಿತ್ಸೆಗಾಗಿ ರಹಮಾನ್ 2014 ರ ಆರಂಭದಲ್ಲಿ ಸಿರಿಯಾದ ಐಸಿಸ್ ವೈದ್ಯಕೀಯ ಶಿಬಿರಕ್ಕೆ ಭೇಟಿ ನೀಡಿದ್ದ ಮತ್ತು ಭಾರತಕ್ಕೆ ಮರಳುವ ಮೊದಲು 10 ದಿನಗಳ ಕಾಲ ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗೆ ಇದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆತನ ಬಂಧನದ ನಂತರ, ಎನ್ಐಎ ಕರ್ನಾಟಕ ಪೊಲೀಸರ ನೆರವಿನೊಂದಿಗೆ ಬೆಂಗಳೂರಿನಲ್ಲಿ ಆತನಿಗೆ ಸಂಬಂಧಿಸಿದ ಜಾಗದಲ್ಲಿ ಶೋಧ ನಡೆಸಿದ್ದು ಡಿಜಿಟಲ್ ಸಾಧನಗಳು, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಗಳನ್ನು ವಶಪಡಿಸಿಕೊಂಡಿದೆ.

2020ರ ಮಾರ್ಚ್ ತಿಂಗಳಿನಲ್ಲಿ ಕಾಶ್ಮೀರಿ ದಂಪತಿಗಳಾದ ಜಹಾನ್ಜೈಬ್ ಸಾಮಿ ವಾನಿ ಮತ್ತು ಅವರ ಪತ್ನಿ ಹಿನಾ ಬಶೀರ್ ಬೀಘ್ ಅವರನ್ನು ದೆಹಲಿಯ ಜಾಮಿಯಾ ನಗರ ಒಖ್ಲಾ ವಿಹಾರ್ ನಿಂದ ಬಂಧಿಸಿದ್ದು, ಅವರು ನೀಡಿರುವ ಮಾಹಿತಿಯನ್ನು ಆಧರಿಸಿ ತನಿಖಾ ದಳವು ಅಬ್ದುರ್ ರಹಮಾನ್ ನನ್ನು ಬಂಧಿಸಿದೆ.
ದಂಪತಿಗಳು ಐಎಸ್’ಕೆಪಿ ಮತ್ತು ಐಸಿಸ್ ಜೊತೆ ಸಂಬಂಧ ಹೊಂದಿದ್ದರು ಮತ್ತು ವಿಧ್ವಂಸಕ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲ ಈಗಾಗಲೇ ಎನ್‌ಐಎ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಅಬ್ದುಲ್ಲಾ ಬಸಿತ್ ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ಎನ್ಐಎ ತಿಳಿಸಿದೆ.
ರಹಮಾನ್ ವಿಚಾರಣಾ ಸಂದರ್ಭದಲ್ಲಿ ಸಿರಿಯಾ ಮೂಲದ ಐಸಿಸ್ ಕಾರ್ಯಕರ್ತರೊಂದಿಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದು ರಹಮಾನ್, ಸಂಘರ್ಷದಲ್ಲಿ ಗಾಯಗೊಂಡ ಐಸಿಸ್ ಕಾರ್ಯಕರ್ತರಿಗೆ ಸಹಾಯ ಮಾಡಲು ವೈದ್ಯಕೀಯ ಅಪ್ಲಿಕೇಶನ್ ಮತ್ತು ಶಸ್ತ್ರಾಸ್ತ್ರ-ಸಂಬಂಧಿತ ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಎನ್.ಐ.ಎ. ಅಧಿಕಾರಿಗಳು ತಿಳಿಸಿದ್ದಾರೆ.








