Bengaluru : ಕಾರ್ ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ; ಯುವಕನ ಕೊಲೆಯಲ್ಲಿ ಅಂತ್ಯ….
ಕಾರ್ ಪಾರ್ಕಿಂಗ್ ಕಾರಣಕ್ಕಾಗಿ ನಡೆದ ಜಗಳ ತಾರಕಕ್ಕೇರಿ ಕೊಲೆಯಾಗಿರುವ ಘಟನೆ ಬೆಂಗಳೂರು ಹೊರಹೊಲಯದಲ್ಲಿ ನಡೆದಿದೆ. ಹೊಸಕೋಟೆ ತಾಲೂಕಿನ ಮೇಡಿಮಲ್ಲಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಸ್ಮಾಯಿಲ್ ಖಾನ್(26)ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಆಸ್ತಿ ಹಂಚಿಕೆ ವಿಚಾರದ ವೈಷಮ್ಯ ಕಾರು ನಿಲ್ಲಿಸುವ ವೇಳೆ ಜಗಳಕ್ಕೆ ಕಾರಣವಾಗಿದೆ. ಈ ವೇಳೆ ಚಾಕುವಿನಿಂದ ಇರಿದು ಇಸ್ಮಾಯಿಲ್ ಖಾನ್ ನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಯ್ಯದ್ ಹಿದಾಯತ್ ಶಾ, ಸಯ್ಯದ್ ಅಜೀಂ ಶಾ, ಸಯ್ಯದ್ ಅಖಿಲ್ ಶಾ ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ ಹಲವು ದಿನಗಳಿಂದ ದಾಯಾದಿಗಳ ಮಧ್ಯೆ ಆಸ್ತಿ ವಿಚಾರಕ್ಕೆ ಕಲಹ ನಡೆಯುತ್ತಿದ್ದು, ಈ ನಡುವೆ ಮನೆ ಮುಂದೆ ಕಳೆದ ರಾತ್ರಿ ಕಾರು ನಿಲ್ಲಿಸುವ ವಿಚಾರಕ್ಕೆ ಜಗಳ ಉಂಟಾಗಿದೆ. ಬಳಿಕ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಡ್ರಾಗರ್ ನಿಂದ ಎದೆ ಮತ್ತು ಮೂತ್ರಪಿಂಡ ಜಾಗಕ್ಕೆ ಇರಿದು ಹಲ್ಲೆ ಮಾಡಲಾಗಿದ್ದು, ಸ್ಥಳದಲ್ಲೇ ಇಸ್ಮಾಯಿಲ್ ಖಾನ್ ಸಾವನ್ನಪ್ಪಿದ್ದಾನೆ.
ಕೊಲೆ ನಡೆಸಿ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಅನುಗೊಂಡನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Bengaluru: Car parking issue; End in the murder of a young man.