ಬೆಂಗಳೂರು ನಗರ ಸಾರಿಗೆ ಸಂಸ್ಥೆ (BMTC)ಗೆ ಸೇರಿದ ಎಲೆಕ್ಟ್ರಿಕ್ ಬಸ್‌ನಲ್ಲಿ ನಡೆದ ಅಹಿತಕರ ಘಟನೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಕೈ ಮಾಡಿದ ಆರೋಪದ ಮೇರೆಗೆ ಬಸ್ ಚಾಲಕನನ್ನು ತಾತ್ಕಾಲಿಕವಾಗಿ ವಜಾಗೊಳಿಸುವ ನಿರ್ಧಾರ BMTC ತೆಗೆದುಕೊಂಡಿದೆ.
ಸೆಪ್ಟೆಂಬರ್ 8ರಂದು ಪೀಣ್ಯದಿಂದ ಬಾಣಾವರ ಕಡೆಗೆ ಸಂಚರಿಸುತ್ತಿದ್ದ KA 51 AK 4276 ಸಂಖ್ಯೆಯ ಎಲೆಕ್ಟ್ರಿಕ್ ಬಸ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ಪ್ರಕಾರ, ಮಹಿಳಾ ಪ್ರಯಾಣಿಕರು ಮೊದಲು ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಆ ಬಳಿಕ ಚಾಲಕ ಕೂಡ ಪ್ರತಿಯಾಗಿ ಕೈ ಮಾಡಿದ ಘಟನೆ ನಡೆದಿದೆ. ಇದರಿಂದ ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು.
ಈ ಕುರಿತು ಸ್ಪಂದಿಸಿದ BMTC, ಮಹಿಳೆಯ ಮೇಲೆ ಕೈ ಮಾಡಿದ ಚಾಲಕನನ್ನು ತಾತ್ಕಾಲಿಕ ವಜಾ ಮಾಡಿದ್ದು, ಮುಂದಿನ ತನಿಖೆಯ ವರದಿಯ ಆಧಾರದ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.








