ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ವೇಳೆಯೇ ಸಾಕಷ್ಟು ಹಿಂಸಾಚಾರ ನಡೆದಿತ್ತು. ಈಗ ಮತ ಎಣಿಕೆ ನಡೆಯುತ್ತಿದ್ದು, ಮತ ಎಣಿಕೆಯ ಕೇಂದ್ರದ ಹೊರಗೆ ಬಾಂಬ್ ಸ್ಫೋಟವಾಗಿರುವ ಘಟನೆ ನಡೆದಿದೆ.
ಈ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿರುವ ಡೈಮಂಡ್ ಹಾರ್ಬರ್ ಪಟ್ಟಣದಲ್ಲಿ ಪಂಚಾಯತ್ ಚುನಾವಣಾ ಮತ ಎಣಿಕೆ ಕೇಂದ್ರದ ಬಳಿ ನಡೆದಿದೆ. ಹೀಗಾಗಿ ಜನರು ಭಯದಿಂದ ಓಡಿ ಹೋಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. 8ರಂದು ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ನಡೆದಿತ್ತು. 22 ಜಿಲ್ಲೆಗಳ 73,887 ಸ್ಥಾನಗಳಿಗೆ ಪಂಚಾಯತ್ ಸಮಿತಿಗಳು ಮತ್ತು ಗ್ರಾಮ ಪಂಚಾಯಿತಿಗಳ ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆದಿದ್ದವು. ಚುನಾವಣೆಯಲ್ಲಿ ಸುಮಾರು 2 ಲಕ್ಷ ಜನ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.
ಚುನಾವಣೆ ದಿನದಂದು ಉದ್ವಿಗ್ನತೆ ಉಂಟಾಗಿದ್ದರ ಹಿನ್ನೆಲೆಯಲ್ಲಿ ಜುಲೈ 10 ರಂದು 696 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಮತ ಎಣಿಕೆ ವೇಳೆ ಹಿಂಸಾಚಾರದಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಪಾಲ ಆನಂದ ಬೋಸ್ ಕಠಿಣ ಎಚ್ಚರಿಕೆ ನೀಡಿದ್ದರು. ಈ ಮಧ್ಯೆಯೇ ಮತ್ತೊಂದು ಘಟನೆ ವರದಿಯಾಗಿದೆ.