ಹೈದರಾಬಾದ್ : ‘ನನ್ನ ಹೃದಯಬಡಿತ ನಿಂತುಹೋಗಿದೆ, ಶ್ವಾಸಕೋಶಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಡ್ಯಾಡಿ…. ಬೈ ಡ್ಯಾಡಿ’ ಎಂದು ಕೋವಿಡ್ -19 ಗೆ ಬಲಿಯಾಗುವ ಕೆಲವೇ ನಿಮಿಷಗಳ ಮೊದಲು ಹೈದರಾಬಾದ್‌ನ 26 ವರ್ಷದ ಯುವಕನೊಬ್ಬ ಆಸ್ಪತ್ರೆಯ ಬೆಡ್ ನಿಂದಲೇ ತಂದೆಗೆ ಸೆಲ್ಫಿ ವಿಡಿಯೋ ಕಳುಹಿಸಿದ್ದಾನೆ.
ಕಳೆದ ಶುಕ್ರವಾರ ರಾತ್ರಿ ಹೈದರಾಬಾದ್ ನ ಎರ್ರಗಡ್ಡಾದಲ್ಲಿರುವ ‘ಸರ್ಕಾರಿ ಚೆಸ್ಟ್ ಆಸ್ಪತ್ರೆ’ಯ ವಾರ್ಡ್ ವೊಂದರಲ್ಲಿ ಈ ಘಟನೆ ನಡೆದಿದೆ.
ವಿಡಿಯೋದಲ್ಲಿ ಯುವಕ “ಅವರು ವೆಂಟಿಲೇಟರ್ ತೆಗೆದಿದ್ದಾರೆ. ಕಳೆದ ಮೂರು ಗಂಟೆಗಳಿಂದ ನನಗೆ ಆಕ್ಸಿಜನ್ ನೀಡಿ ಎಂದು ಕೇಳಿಕೊಂಡ್ರೂ ನನ್ನ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ” ಎಂದು ಮೃತ ಯುವಕ ಹೇಳಿದ್ದಾನೆ. ನನ್ನ ಹೃದಯಬಡಿತ ನಿಂತುಹೋಗಿದೆ, ಶ್ವಾಸಕೋಶಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಡ್ಯಾಡಿ…. ಬೈ ಡ್ಯಾಡಿ…. ಎಲ್ಲರಿಗೂ ಬೈ ಎಂದು ಸಾಯೋ ಮುನ್ನ ವಿಡಿಯೋ ಮಾಡಿ ಮೃತಪಟ್ಟಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ಯುವಕನ ತಂದೆ, ವಿಡಿಯೋ ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ನನ್ನ ಮಗ ಮೃತಪಟ್ಟಿದ್ದಾನೆ. “ನನ್ನ ಮಗ ಜೂನ್ 24 ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ. ಕೆಲವು ಆಸ್ಪತ್ರೆಗಳಿಗೆ ಅಲೆದಾಡಿ ಕೊನೆಗೆ ಜೂನ್ 24 ರಂದೇ ‘ಸರ್ಕಾರಿ ಚೆಸ್ಟ್ ಆಸ್ಪತ್ರೆ’ಗೆ ದಾಖಲಿಸಲಾಯಿತು. ಅದೇ ಆಸ್ಪತ್ರೆಯಲ್ಲಿ ಜೂನ್ 26 ರಂದು ಆತ ಸಾವನ್ನಪ್ಪಿದ್ದ. ಶನಿವಾರದಂದು ಅವನ ಅಂತ್ಯಸಂಸ್ಕಾರ ಮಾಡಲಾಯ್ತು ಎಂದು ಹೇಳಿದ್ದಾರೆ.