ಬೆಂಗಳೂರು: ಕಲಬುರಗಿಯಲ್ಲಿ ಮಂಗಳವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಿಎಂ ಸೇರಿದಂತೆ ಸಚಿವರು ಕಲಬುರಗಿಗೆ ತೆರಳಿದ್ದಾರೆ.
ಬರೋಬ್ಬರಿ ದಶಕದ ನಂತರ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ (Kalaburagi) ಸಚಿವ ಸಂಪುಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಸೋಮವಾರವೇ ಕಲಬುರಗಿಗೆ ಹೋಗಿದ್ದಾರೆ.
ಮಂಗಳವಾರ ಬೆಳಗ್ಗೆ 8.25ಕ್ಕೆ ಸರ್ಧಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಿರುವ ಸಿಎಂ ಸಿದ್ದರಾಮಯ್ಯ, 9 ಗಂಟೆಗೆ ಡಿಎಆರ್ ಪೊಲೀಸ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನದ ಅಂಗವಾಗಿ ಧ್ವಜಾರೋಹಣ ನಡೆಸಲಿದ್ದಾರೆ.
ಸಂಜೆ 4ಕ್ಕೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಸಂಪುಟ ಸಭೆಯ ಸಿದ್ಧತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ಪರಿಶೀಲನೆ ನಡೆಸಿದ್ದಾರೆ.