ಮಾದೇಶ್ವರನ ಕೋಲುಮಂಡೆ ಹಾಡು ಹಾಡಿ ವಿವಾದಕ್ಕೀಡಾಗಿರುವ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ವಿರುದ್ಧ ಮಾದಪ್ಪನ ಭಕ್ತರು ಕಿಡಿಕಿಡಿ ಕೆಂಡ ಕಾರುತ್ತಿದ್ದಾರೆ. ಕೋಲುಮಂಡೆ ಹಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಮಹಾದೇಶ್ವರನ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಚಂದನ್ ಶೆಟ್ಟಿ ವಿರುದ್ಧ ಚಂದನ್ ಶೆಟ್ಟಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಂದನ್ ವಿರುದ್ಧ ಹಿಂದೂ ಸಂಘಟನೆಯ ಕಾರ್ಯಕರ್ತರಾದ ತೇಜಸ್ ಎಂಬುವವರು ದೂರು ಸಲ್ಲಿಸಿದ್ದಾರೆ.
ಕೋಲುಮಂಡೆ ಜಂಗಮದೇವ ಜಾನಪದ ಹಾಡನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡು, ಇತಿಹಾಸ ತಿರುಚಿ ಚಿತ್ರಿಕರಿಸಿದ್ದಾರೆ ಎನ್ನುವ ಆರೋಪ ಸದ್ಯ ಚಂದನ್ ಮೇಲಿದೆ. ಈ ಹಾಡಿನಲ್ಲಿ ಶರಣೆ ಸಂಕಮ್ಮ ಅವರನ್ನು ಅಶ್ಲೀಲವಾಗಿ ಪ್ರದರ್ಶಿಸಲಾಗಿದೆ. ಆ ಮೂಲಕ ಶರಣೆ ಸಂಕಮ್ಮರನ್ನು ಅವಮಾನಿಸಲಾಗಿದೆ ಎಂದು ಚಂದನ್ ವಿರುದ್ಧ ಮಾದಪ್ಪನ ಭಕ್ತರು ಕಿಡಿಕಾರುತ್ತಿದ್ದಾರೆ. 
ಚಂದನ್ ಶೆಟ್ಟಿ ಹಾಡಿರುವ ಕೋಲುಮಂಡೆ ಹಾಡನ್ನು ಯೂಟ್ಯೂಬ್ ಸೇರಿದಂತೆ ಎಲ್ಲ ಕಡೆಯೂ ತೆಗೆಯಬೇಕು. ಇಲ್ಲವಾದಲ್ಲಿ ಚಂದನ್ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಅವರ ಕಾರ್ಯಕ್ರಮ ಬಹಿಷ್ಕರಿಸಬೇಕಾಗುತ್ತದೆ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಹಾಡು ಇಷ್ಟು ದೊಡ್ಡ ಪ್ರಮಾಣದಲ್ಲಿ ವಿವಾದಕ್ಕೆ ಕಾರಣವಾದ ತಕ್ಷಣವೇ ಚಂದನ್ ಶೆಟ್ಟಿ ಅವರು ಕ್ಷಮೆಯಾಚಿಸಿದ್ರು. ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ನಿಂದ ಡಿಲೀಟ್ ಸಹ ಮಾಡಲಾಗಿದೆ.









