ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೋವಿಡ್-19 ವೈರಸ್ ನ ಕೇಂದ್ರ ಚೀನಾದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದ್ದು, ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಒಂಬತ್ತು ವಾರಗಳ ಲಾಕ್ ಡೌನ್ ಬಳಿಕ ಜನಜೀವನ ಯಥಾಸ್ಥಿತಿಗೆ ಬಂದಿದ್ದು, ಚೀನದ ವುಹಾನ್ ನಗರದಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳು ಆರಂಭಗೊಳ್ಳುತ್ತಿವೆ. ಜನರು ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ರಸ್ತೆಗಳಿಯುತ್ತಿದ್ದಾರೆ.
ಚೀನಾದ ವುಹಾನ್ ನಲ್ಲಿ ಕೊವಿಡ್-19 ವೈರಸ್ ವ್ಯಾಪಕವಾಗಿ ಹರಡಿದ ಪರಿಣಾಮ, ವೈರಸ್ ನಿಂದ ರಕ್ಷಿಸಿಕೊಳ್ಳಲು ಜನವರಿಯ ಕೊನೆಯ ವಾರದಲ್ಲಿ ಇಡೀ ನಗರವನ್ನು ಲಾಕ್ ಡೌನ್ ಮಾಡಲಾಗಿತ್ತು. ಇದರಿಂದಾಗಿ ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು ಮತ್ತು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು. ಒಂಬತ್ತು ವಾರಗಳ ಲಾಕ್ ಡೌನ್ ಬಳಿಕ ಇದೀಗ ಚೀನಾದ ಬಹುತೇಕ ನಗರಗಳು ಎಂದಿನ ಜನಜೀವನಕ್ಕೆ ತೆರೆದುಕೊಳ್ಳುತ್ತಿದೆ. ರೆಸ್ಟೋರೆಂಟ್ ಗಳು, ಶಾಪಿಂಗ್ ಮಾಲ್ ಗಳು ತೆರೆಯುತ್ತಿದ್ದು, ಮಾಲ್ ಗಳ ಪಾರ್ಕಿಂಗ್ ಏರಿಯಾಗಳು ವಾಹನಗಳಿಂದ ತುಂಬುತ್ತಿವೆ. ಶಾಲಾ ಕಾಲೇಜು ಆಡಳಿತ ಮಂಡಳಿಗಳು ಸಭೆ ನಡೆಸಿ, ಮುಂಬರುವ ವಾರದಿಂದ ಎಂದಿನಂತೆ ಶಾಲಾ ಕಾಲೇಜುಗಳು ನಡೆಯಲಿದೆ ಎಂದು ಹೇಳಿದ್ದಾರೆ.
ಚೀನಾದಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿ ಇದ್ದು, ಸಹಜ ಸ್ಥಿತಿಗೆ ಮರಳುತ್ತಿದ್ದರೂ ಸರಕಾರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸಿದೆ. ಪ್ರತಿದಿನ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ, ಬಸ್ ಗಳಿಗೆ ಸ್ಯಾನಿಟೈಸರ್ ಗಳನ್ನು ಸಿಂಪಡಿಸಲಾಗುತ್ತಿದೆ. ಪ್ರತಿ ಬಸ್ ನಿಲ್ದಾಣಗಳಲ್ಲಿ ಆಂಬುಲೆನ್ಸ್ ಗಳು ಇದ್ದು, ಅದರಲ್ಲಿ ವೈದ್ಯರು , ವೆಂಟಿಲೇಟರ್ ಅನ್ನು ಒದಗಿಸಲಾಗಿದೆ. ಪ್ರತಿ ಬಸ್ ಗಳಲ್ಲಿ ಡ್ರೈವರ್ ನೊಂದಿಗೆ ಒಬ್ಬ ಮೇಲ್ವಿಚಾರಕನಿದ್ದು, ಬಸ್ ನಿಲ್ದಾಣಗಳಲ್ಲಿ ಎಲ್ಲಾ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿಯೇ ಅವರನ್ನು ಬಸ್ ನ ಒಳಗೆ ಸೇರಿಸಿಕೊಳ್ಳಲಾಗುತ್ತಿದೆ. ಟೆಂಪರೇಚರ್ ಟೆಸ್ಟ್ ನಲ್ಲಿ ಪಾಸ್ ಆದವರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಯಾರಲ್ಲಾದರೂ ಕೊರೊನಾ ಸೋಂಕಿನ ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಅವರನ್ನು ಬಸ್ ನಿಲ್ದಾಣದಿಂದ ಆಂಬುಲೆನ್ಸ್ ವಾಹನಗಳ ಮೂಲಕ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗುತ್ತಿದೆ.
ರಸ್ತೆಯಲ್ಲಿ ನಡೆಯುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲೇ ಬೇಕೆಂದು ಅಲ್ಲಿನ ಆರೋಗ್ಯ ಇಲಾಖೆ ಸೂಚಿಸಿದೆ. ಪ್ರಯಾಣಿಕರು ಬಸ್ ಹತ್ತುವ ಸಂದರ್ಭದಲ್ಲೂ ಮಾಸ್ಕ್ ಬಳಸುವುದು ಕಡ್ಡಾಯವಾಗಿದೆ. ಹಿರಿಯ ನಾಗರಿಕರಿಗೆ ಕೋವಿಡ್-19 ವೈರಸ್ ಹೆಚ್ಚು ಅಪಾಯಕಾರಿ ಆಗಿರುವುದರಿಂದ 65 ವರ್ಷ ಮೇಲ್ಪಟ್ಟವರು ಯಾವುದೇ ಕಾರಣಕ್ಕೆ ರಸ್ತೆಗಿಳಿಯದಂತೆ ತಾಕೀತು ಮಾಡಲಾಗಿದೆ. ಪೊಲೀಸರ ಕಣ್ತಪ್ಪಿಸಿ ಯಾರಾದರೂ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬಂದರೆ ಅವರನ್ನು ಬಂಧನಕ್ಕೆ ಒಳಪಡಿಸಲಾಗುತ್ತಿದೆ. ಇನ್ನು ಸಾರ್ವಜನಿಕ ಬಸ್ ಗಳಲ್ಲೂ ಅವರು ಪ್ರಯಾಣಿಸುವಂತಿಲ್ಲ.
ಚೀನಾದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದರೂ, ಜಗತ್ತಿನಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿ ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಿದ್ದು, ವಿಶ್ವದಾದ್ಯಂತ ಲಾಕ್ ಡೌನ್ ಪರಿಸ್ಥಿತಿ ಇದೆ. 198 ರಾಷ್ಟ್ರಗಳಿಗೆ ಹಬ್ಬಿರುವ ಕೊರೊನಾ ವೈರಸ್ ಸೋಂಕು ಇಟಲಿಯನ್ನು ಮರಣದ ಕೂಪಕ್ಕೆ ತಳ್ಳಿದೆ.