ದೋಸ್ತಿ ಹೆಸರಲ್ಲಿ ನೇಪಾಳದ ಬೆನ್ನಿಗೆ ಚೂರಿ ಹಾಕಿದ ಚೀನಾ
ಕಠ್ಮಂಡು, ಜೂನ್ 25: ಡ್ರ್ಯಾಗನ್ ರಾಷ್ಟ್ರ ಚೀನಾ ದೋಸ್ತಿ ಹೆಸರಲ್ಲಿ ನೇಪಾಳದ ಬೆನ್ನಿಗೆ ಚೂರಿ ಹಾಕಿದೆ. ಚೀನಾ ಗಡಿ ರಸ್ತೆಗಳ ನಿರ್ಮಾಣದ ಹೆಸರಿನಲ್ಲಿ 10 ಹಳ್ಳಿಗಳನ್ನು ಕಬಲಿಸಿದ್ದು, ನೇಪಾಳದ 33 ಹೆಕ್ಟೇರ್ ಭೂಪ್ರದೇಶ ಚೀನಾ ಪಾಲಾಗಿದೆ.
ಟಿಬೆಟ್ ಗಡಿಯ ರಸ್ತೆ ನಿರ್ಮಾಣದ ಹೆಸರಲ್ಲಿ 10 ಹಳ್ಳಿಗಳನ್ನು ಅತಿಕ್ರಮಿಸಿರುವ ಚೀನಾ ಆ ಪ್ರದೇಶದಲ್ಲಿ ಚೀನಾ ಗಡಿಪೋಸ್ಟ್ ನಿರ್ಮಿಸುವ ಸಾಧ್ಯತೆ ಇದೆ ಎಂದು ನೇಪಾಳದ ಕೃಷಿ ಇಲಾಖೆಯು ಸರ್ಕಾರವನ್ನು ಎಚ್ಚರಿಸಿದೆ.
ತನ್ನ ಭೂ ಪ್ರದೇಶವನ್ನು ವಿಸ್ತರಿಸಲು ನದಿಗಳ ದಿಕ್ಕನ್ನು ಬದಲಿಸಿದ್ದು, ಚೀನಾದ ಗಡಿರಸ್ತೆಗಳ ನಿರ್ಮಾಣ ಕಾರ್ಯದಿಂದ ಬಾಗ್ದಾರೆ ಖೋಲಾ ಹಾಗೂ ಕರ್ನಾಲಿ ನದಿಗಳು ನೇಪಾಳದ ಹಳ್ಳಿಗಳತ್ತ ತಿರುಗಿದೆ. ಇದರಿಂದಾಗಿ ನೇಪಾಳದ ಹಳ್ಳಿಗಳು ಈ ಮಳೆಗಾಲದಲ್ಲಿ ಕೊಚ್ಚಿಹೋಗುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ಆತಂಕ ವ್ಯಕ್ತಪಡಿಸಿದೆ.
ನೇಪಾಳದ 11 ಹಳ್ಳಿಗಳ ಮೇಲೆ ಕಣ್ಣು ಹಾಕಿರುವ ಚೀನಾ ಈಗಾಗಲೇ 10 ಹಳ್ಳಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಸಿಂಜೆನ್, ಭುರ್ಜುಕ್ ಮತ್ತು ಜಂಬು ಖೋಲಾ ಪ್ರದೇಶಗಳ ಗುರುತೇ ಸಿಗದಂತೆ ಮಾಡಿದೆ.