ಬೆಂಗಳೂರು, ಜೂನ್ 8: ನಟ ಚಿರಂಜೀವಿ ಸರ್ಜಾ ಆಕಾಲ ಮರಣಕ್ಕೆ ಸ್ಯಾಂಡಲ್ ವುಡ್ ತಾರೆಯರು ಕಂಬನಿ ಮಿಡಿದಿದ್ದಾರೆ.
ಹಿರಿಯ ನಟಿ ತಾರಾ ಚಿರುಗೆ ಹೃದಯಾಘಾತವೆಂದು ಒಂದು ವಾಹಿನಿಯಲ್ಲಿ ನೋಡಿದೆ. ಮೊದಲು ಇದು ಫೇಕ್ ನ್ಯೂಸ್ ಎಂದುಕೊಂಡೆ. ಆದರೆ ಸತ್ಯವಾಗಿಹೋಯಿತು ಎಂದು ಬಿಕ್ಕಿ ಬಿಕ್ಕಿ ಅತ್ತರು.
ಸುಮಲತಾ ಅಂಬರೀಷ್ ಅವರು ಚಿರಂಜೀವಿ ಅವರ ಸಾವಿನಿಂದ ತುಂಬ ಆಘಾತಕ್ಕೆ ಒಳಗಾಗಿದ್ದು, ಚಿರಂಜೀವಿಗೆ ಅಂಬರೀಷ್ ಎಂದರೆ ತುಂಬ ಪ್ರೀತಿ.
ಅವರ ಆರೋಗ್ಯದಲ್ಲಿ ಸ್ವಲ್ಪವೇ ಹೆಚ್ಚುಕಮ್ಮಿಯಾದರೂ ಓಡಿಬರುತ್ತಿದ್ದರು. ಈಗ ಚಿರು ಇಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆ ಚಿಕ್ಕ ಹುಡುಗಿ ಮೇಘನಾಳನ್ನು ನೆನೆಸಿಕೊಂಡರೆ ತುಂಬ ದುಃಖವಾಗುತ್ತದೆ. ಇಂದು ತುಂಬ ಕೆಟ್ಟದಿನ ಎಂದು ಭಾವುಕರಾದರು.
ಜಯನಗರದ ಅಪೋಲೋ ಆಸ್ಪತ್ರೆಗೆ ಆಗಮಿಸಿದ ನಟ ಶಿವರಾಜ್ ಕುಮಾರ್ ಅವರು ಮಾತನಾಡಿ, ನಾನು ಮಧ್ಯಾಹ್ನ ಮಲಗಿದ್ದೆ. ಎದ್ದ ತಕ್ಷಣ ನ್ಯೂಸ್ ನೋಡಿ ಶಾಕ್ ಆಯಿತು. ನೋವು, ಸಂಕಟ ಒಟ್ಟಿಗೇ ಆಯಿತು. ಚಿರು ಒಳ್ಳೆಯ ನಟ. ಅದಕ್ಕಿಂತ ಹೆಚ್ಚಾಗಿ ತುಂಬ ಒಳ್ಳೆಯ ವ್ಯಕ್ತಿ, ಸ್ವಲ್ಪವೂ ಜಂಭವಿರಲಿಲ್ಲ. ಎಲ್ಲರ ಜತೆಗೂ ಹೊಂದಿಕೊಳ್ಳುತ್ತಿದ್ದ. ಅವನ ಪತ್ನಿ ಮೇಘನಾಗೆ ಇನ್ನೂ ಚಿಕ್ಕವಯಸ್ಸು. ಅವಳಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಒಬ್ಬ ತಮ್ಮನನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ ಎಂದರು.
ಹಿರಿಯ ನಟಿ ಸುಧಾರಾಣಿ ಮಾತನಾಡಿ ಮೊದಲು ಒಂದಿಬ್ಬರು ಫೋನ್ ಮಾಡಿದರು. ಏನಿದು ಎಲ್ಲರೂ ಹೇಳುತ್ತಿದ್ದಾರಲ್ಲ ಎಂದು ಟಿವಿ ಹಾಕಿದೆ. ಆಗ ನಿಜಕ್ಕೂ ಶಾಕ್ ಆಯಿತು. ಇಷ್ಟು ಚಿಕ್ಕವಯಸ್ಸಿನಲ್ಲಿ ಹೀಗಾಗಬಾರದಿತ್ತು. ಅವರ ಕುಟುಂಬಕ್ಕೆ, ಮೇಘನಾಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದರು.
ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾಧ್ಯಮದವರ ಬಳಿ ಮಾತನಾಡಿ ಚಿರಂಜೀವಿ ಎಂದು ಹೆಸರಿಟ್ಟುಕೊಂಡು 39 ವಯಸ್ಸಿಗೆ ಹೋಗಿಬಿಟ್ಟರು. ನಾನು ಅವರೊಂದಿಗೆ ಸಿನಿಮಾ ಮಾಡದೆ ಇದ್ದರೂ ವೈಯಕ್ತಿಕವಾಗಿ ಅವರನ್ನು ಬಲ್ಲೆ. ತುಂಬ ನೋವಿನ ವಿಷಯ ಇದು ಎಂದು ಕಂಬನಿ ಮಿಡಿದರು.








