ರಾಜ್ಯದಲ್ಲಿ ಮೊದಲ ಹಂತದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಸಿನಿ ತಾರೆಯರು ಕೂಡ ಬೆಳಿಗ್ಗೆಯಿಂದಲೇ ಬೂತ್ ಗೆ ತೆರಳಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಡಾ. ರಾಜ್ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ (Raghavendra Raj Kumar), ಅವರ ಪತ್ನಿ ಮಂಗಳ ರಾಘವೇಂದ್ರ ರಾಜ್ ಕುಮಾರ್, ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Raj Kumar) ತಮ್ಮ ಹಕ್ಕು ಚಲಾಯಿಸಿದ್ದಾರೆ.
ನಟಿ ಅಮೂಲ್ಯ ಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತವರಿಗೆ ಮನವಿ ಮಾಡಿ ಮತ ಹಾಕಿದ್ದಾರೆ. ಮತದಾರರು ಉತ್ಸಾಹದಿಂದ ಬೆಳಿಗ್ಗೆಯಿಂದಲೇ ಆಗಮಿಸಿ ಮತದಾನ ಮಾಡುತ್ತಿದ್ದಾರೆ. ನಾನು ಮಕ್ಕಳು ಇರುವುದರಿಂದಾಗಿ ಮನವಿ ಮಾಡಿ ಬೇಗ ಮತದಾನ ಮಾಡಿದೆ ಎಂದು ಹೇಳಿದ್ದಾರೆ.
ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ಕೂಡ ಮತದಾನ ಮಾಡಿದ್ದಾರೆ. ನನ್ನ ಹಕ್ಕು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಎಲ್ಲರ ಕರ್ತವ್ಯ ಎಂದು ಮತದಾರರಿಗೆ ಕಿವಿ ಮಾತು ಹೇಳಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ ಎಂದು ಮನವಿ ಮಾಡಿದರು.