Cooking : ವಿವಿಧ ಟೇಸ್ಟಿ , ಸಿಂಪಲ್ ಅಡುಗೆ ರೆಸಿಪೀಸ್
ಬೀನ್ಸ್ ಮಜ್ಜಿಗೆ ಹುಳಿ
ಬೇಕಾಗುವ ಸಾಮಗ್ರಿಗಳು
ಅಕ್ಕಿ – 1 ಚಮಚ
ಕಡ್ಲೆಬೇಳೆ - 1 ಚಮಚ
ಜೀರಿಗೆ – 1 ಚಮಚ
ಬೀನ್ಸ್ – 1/4 ಕೆ.ಜಿ
ತೆಂಗಿನಕಾಯಿ ತುರಿ – 1/4 ಕಪ್
ಹಸಿಮೆಣಸಿನಕಾಯಿ – 2
ಗಟ್ಟಿ ಮೊಸರು – 1/2 ಕಪ್
ಒಗ್ಗರಣೆಗೆ
ತುಪ್ಪ – 1 ಚಮಚ
ಸಾಸಿವೆ – 1/4 ಚಮಚ
ಜೀರಿಗೆ – 1/4 ಚಮಚ
ಕರಿಬೇವು – ಸ್ವಲ್ಪ
ಇಂಗು – ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಮೊದಲು ಅಕ್ಕಿ ಮತ್ತು ಕಡ್ಲೆಬೇಳೆ ಗಳನ್ನು ಚೆನ್ನಾಗಿ ತೊಳೆದು ಮುಳುಗುವಷ್ಟು ನೀರು ಹಾಕಿ 1- 2ಗಂಟೆಗಳ ಕಾಲ ನೆನೆಯಲು ಬಿಡಿ.
ನಂತರ ಬೀನ್ಸ್ ತೊಟ್ಟು ನಾರು ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಬೀನ್ಸ್ ಅನ್ನು ಬೇಯಿಸಿ ಇಟ್ಟುಕೊಳ್ಳಿ.
ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ನೆನೆಸಿಟ್ಟ ಅಕ್ಕಿ, ಕಡ್ಲೆಬೇಳೆ, ಜೀರಿಗೆ ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಈ ರುಬ್ಬಿದ ಮಿಶ್ರಣವನ್ನು ಬೇಯಿಸಿಟ್ಟುಕೊಂಡ ಬೀನ್ಸ್ ಪಾತ್ರೆಗೆ ಸೇರಿಸಿ ಚೆನ್ನಾಗಿ ಕುದಿಸಿ. ಈಗ ಗ್ಯಾಸ್ ನಿಂದ ಕೆಳಗಿಳಿಸಿ ಮೊಸರು ಬೆರೆಸಿ.
ನಂತರ ಒಗ್ಗರಣೆಗೆ ತುಪ್ಪ ಬಿಸಿ ಮಾಡಿ. ಬಿಸಿಯಾದ ಬಳಿಕ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಜೀರಿಗೆ, ಕರಿಬೇವು, ಇಂಗು ಸೇರಿಸಿ ಬೀನ್ಸ್ ಮಜ್ಜಿಗೆ ಹುಳಿ ಜೊತೆಗೆ ಮಿಶ್ರ ಮಾಡಿ. ಈಗ ಬೀನ್ಸ್ ಮಜ್ಜಿಗೆ ಹುಳಿ ಸವಿಯಲು ಸಿದ್ಧವಾಗಿದೆ.
ಗೋಧಿ ಮತ್ತು ರಾಗಿಯ ಬರ್ಫಿ
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು – 1ಕಪ್
ರಾಗಿ ಹಿಟ್ಟು – 1ಕಪ್
ಹಾಲು – 1ಕಪ್
ತೆಂಗಿನಕಾಯಿತುರಿ – 1 ಕಪ್
ಎಣ್ಣೆ – 1 ಕಪ್
ಸಕ್ಕರೆ – 1 ಕಪ್
ತುಪ್ಪ – 2 – 3 ಚಮಚ
ಏಲಕ್ಕಿ ಪುಡಿ – ಚಿಟಿಕೆಯಷ್ಟು
ಮಾಡುವ ವಿಧಾನ
ಮೊದಲಿಗೆ ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಗೋಧಿ ಹಿಟ್ಟು, ರಾಗಿ ಹಿಟ್ಟುಗಳನ್ನು ಸ್ವಲ್ಪ ಹುರಿಯಿರಿ. ನಂತರ ಅದಕ್ಕೆ ಹಾಲು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಕೈಯಾಡಿಸುತ್ತಾ ಇರಿ. ಮಿಶ್ರಣ ತಳ ಬಿಡುವಾಗ ತುಪ್ಪ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ತುಪ್ಪ ಹಚ್ಚಿದ ತಟ್ಟೆಗೆ ಈ ಮಿಶ್ರಣವನ್ನು ವರ್ಗಾಯಿಸಿ. ಸ್ವಲ್ಪ ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ. ಈಗ ರುಚಿಯಾದ ಗೋಧಿ ಮತ್ತು ರಾಗಿಯ ಬರ್ಫಿ ಸವಿಯಲು ಸಿದ್ಧವಾಗಿದೆ.
ಮಂಗಳೂರು ಬಿಸ್ಕೂಟ್ ಅಂಬಡೆ
ಬೇಕಾಗುವ ಸಾಮಗ್ರಿಗಳು:
1¼ ಕಪ್ ಸ್ವಚ್ಛಗೊಳಿಸಿದ ಉದ್ದಿನ ಬೇಳೆ
ನುಣ್ಣಗೆ ಕತ್ತರಿಸಿದ 2 – 3 ಹಸಿರು ಮೆಣಸಿನಕಾಯಿಗಳು
ಸಣ್ಣದಾಗಿ ಕತ್ತರಿಸಿದ 1 ಇಂಚಿನ ಶುಂಠಿ ತುಂಡು
ಕರಿಬೇವಿನ ಸೊಪ್ಪು ಸುಮಾರು 10 – 12 ಎಲೆಗಳು ಚಿಕ್ಕದಾಗಿ ಕತ್ತರಿಸಿ ಇಟ್ಟು ಕೊಳ್ಳಿ. Mangalore biscuit ambade recipes
1/2 ಟೀಸ್ಪೂನ್ ತಾಜಾ ಕರಿಮೆಣಸು ಹುಡಿ
ರುಚಿಗೆ ತಕ್ಕಷ್ಟು ಉಪ್ಪು
2 ಟೀಸ್ಪೂನ್ ತುರಿದ ಕೊಬ್ಬರಿ
ಹುರಿಯಲು ಸಾಕಷ್ಟು ಎಣ್ಣೆ

ಮಾಡುವ ವಿಧಾನ :
ಸ್ವಚ್ಛಗೊಳಿಸಿದ ಉದ್ದಿನ ಬೇಳೆಯನ್ನು ಕನಿಷ್ಠ 2 – 3 ಗಂಟೆಗಳ ಕಾಲ ನೆನೆಸಿ, ನಂತರ ನೀರನ್ನು ಬಸಿಯಿರಿ.
ಬ್ಲೆಂಡರ್ ಅಥವಾ ಗ್ರೈಂಡರ್ನಲ್ಲಿ, ಉದ್ದಿನ ಬೇಳೆಯನ್ನು ಉಪ್ಪಿನೊಂದಿಗೆ ಹೆಚ್ಚು ನೀರು ಸೇರಿಸದೆ ಚೆನ್ನಾಗಿ ರುಬ್ಬಿ.
ನಂತರ ಕತ್ತರಿಸಿದ ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಕರಿಮೆಣಸು ಹುಡಿ ಮತ್ತು ಕೊಬ್ಬರಿ ತುರಿ ಉದ್ದಿನ ಬೇಳೆ ಹಿಟ್ಟಿಗೆ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು 30 ನಿಮಿಷಗಳ ಕಾಲ ಹಾಗೆ ಬಿಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ . (ಹಿಟ್ಟಿಗೆ ನೀರು ಹೆಚ್ಚಾದರೆ ಅಕ್ಕಿ ಹುಡಿ ಸೇರಿಸಿಕೊಳ್ಳಬಹುದು) ಈಗ ದೊಡ್ಡ ಲಿಂಬೆ ಗಾತ್ರದ ಉಂಡೆಗಳನ್ನು ಮಾಡಿ.
ಮಂಗಳೂರು ಗೋಳಿ ಬಜೆ
ಬೇಕಾಗುವ ಸಾಮಗ್ರಿಗಳು
11/2 ಕಪ್ ಮೈದಾ ಹಿಟ್ಟು
1/4 ಟೀಸ್ಪೂನ್ ಅಡಿಗೆ ಸೋಡಾ
ಚಿಟಕಿ ಇಂಗು
ರುಚಿಗೆ ತಕ್ಕಷ್ಟು ಉಪ್ಪು
1 ಕಪ್ ಮಜ್ಜಿಗೆ
2 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಕರಿಬೇವಿನ ಸೊಪ್ಪುಗಳು
ಚಿಕ್ಕದಾಗಿ ಕತ್ತರಿಸಿದ 2 ಹಸಿಮೆಣಸಿನಕಾಯಿ
ಸಣ್ಣಗೆ ಕತ್ತರಿಸಿದ 1 ಇಂಚಿನ ಶುಂಠಿ
2 ಟೀಸ್ಪೂನ್ ಸಣ್ಣದಾಗಿ ಕತ್ತರಿಸಿದ ಕೊಬ್ಬರಿ
ಹುರಿಯಲು ಎಣ್ಣೆ

ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಮೈದಾ, ಅಡಿಗೆ ಸೋಡಾ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಈಗ 1 ಕಪ್ ಮಜ್ಜಿಗೆ ಅಥವಾ ಮೊಸರನ್ನು ಅದಕ್ಕೆ ಸೇರಿಸಿ.
ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ.
ಅದಕ್ಕೆ ಸಣ್ಣದಾಗಿ ಕತ್ತರಿಸಿದ ಕರಿಬೇವು ಸೊಪ್ಪು, ಹಸಿ ಮೆಣಸು, ಶುಂಠಿ ಮತ್ತು ಕೊಬ್ಬರಿ ಸೇರಿಸಿ.
ಎಲ್ಲವನ್ನೂ ಚೆನ್ನಾಗಿ ಕಲಸಿ ಮಿಶ್ರಣ ಮಾಡಿ. ಹಿಟ್ಟನ್ನು 3 ಗಂಟೆಗಳ ಕಾಲ ಮುಚ್ಚಿಡಿ.
3 ಗಂಟೆಗಳ ನಂತರ, ಹಿಟ್ಟನ್ನು ಮತ್ತೆ ಕಲಸಿ, ಸಣ್ಣ ಚೆಂಡಿನ ಗಾತ್ರದ ಉಂಡೆಗಳನ್ನು ಮಾಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಹಿಟ್ಟಿನ ಉಂಡೆಗಳನ್ನು ಎಣ್ಣೆಯಲ್ಲಿ ಬಿಡಿ. ಮಧ್ಯಮ ಜ್ವಾಲೆಯಲ್ಲಿ ಎರಡೂ ಬದಿಗಳನ್ನು ಹುರಿಯಿರಿ. ಗೋಳಿ ಬಜೆ ಹೊಂಬಣ್ಣಕ್ಕೆ ತಿರುಗಿದ ಬಳಿಕ ಮತ್ತು ಗರಿಗರಿಯಾದ ನಂತರ ಅದನ್ನು ತೆಗೆಯಿರಿ.
ಈಗ ಗೋಳಿ ಬಜೆ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಸಿದ್ಧವಾಗಿದೆ.
ಬಟಾಟೆ ಬೋಂಡಾ
ಬೇಕಾಗುವ ಸಾಮಗ್ರಿಗಳು
ಸಾಸಿವೆ – 1/2 ಚಮಚ
ಉದ್ದಿನ ಬೇಳೆ -1/2 ಚಮಚ
ಹಸಿಮೆಣಸಿನಕಾಯಿ – 2
ಶುಂಠಿ ತುರಿ – 1 ಚಮಚ
ಕರಿಬೇವಿನ ಸೊಪ್ಪು – ಸ್ವಲ್ಪ
ಬೇಯಿಸಿದ ಬಟಾಣಿ – 1/2 ಕಪ್
ಬೇಯಿಸಿದ ಬಟಾಟೆ – 2
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು ಸ್ವಲ್ಪ
ಹುರಿಯಲು ಎಣ್ಣೆ
ಕಡ್ಲೆಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 1 ಚಮಚ
ಕೆಂಪು ಮೆಣಸಿನ ಪುಡಿ – 1/2 ಚಮಚ
ಅಜ್ವೈನ್ – 1/4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಬಿಸಿ ಎಣ್ಣೆ – 1 ಚಮಚ
ಅಗತ್ಯವಿರುವಷ್ಟು ನೀರು

ಮಾಡುವ ವಿಧಾನ
ಮೊದಲಿಗೆ ಬಟಾಟೆಗಳನ್ನು ಬೇಯಿಸಿ ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ನಂತರ ಉದ್ದಿನ ಬೇಳೆ, ಹಸಿ ಮೆಣಸಿನಕಾಯಿ, ಶುಂಠಿ, ಕರಿಬೇವಿನ ಸೊಪ್ಪು ಸೇರಿಸಿ ಹುರಿಯಿರಿ. ಬಳಿಕ ಅದಕ್ಕೆ ಬಟಾಣಿ ಮತ್ತು ಮ್ಯಾಶ್ ಮಾಡಿದ ಬಟಾಟೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕತ್ತರಿಸಿದ ಕೊತ್ತಂಬರಿ ಸೊಪ್ಪುಗಳನ್ನು ಉದುರಿಸಿ. ನಂತರ ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ ಇಟ್ಟುಕೊಳ್ಳಿ.
ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನ ಪುಡಿ, ಅಜ್ವೈನ್, ಉಪ್ಪು, ಬಿಸಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಅಗತ್ಯವಿರುವಷ್ಟು ನೀರು ಸೇರಿಸಿ ಹಿಟ್ಟನ್ನು ತಯಾರಿಸಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ತಯಾರಿಸಿ ಇಟ್ಟುಕೊಂಡ ಅಲೂಪಲ್ಯದ ಉಂಡೆಗಳನ್ನು ಕಡ್ಲೆಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ ತೆಗೆಯಿರಿ. ಈಗ ರುಚಿಯಾದ ಬಿಸಿ ಬಿಸಿ ಅಲೂ ಬೋಂಡ ಸವಿಯಲು ಸಿದ್ಧವಾಗಿದೆ.








