ಕೊರೊನಾ ಹೆಚ್ಚಳ : ಇಂದಿನಿಂದ ಬೆಂಗಳೂರಲ್ಲಿ ನೈಟ್ ಕರ್ಫ್ಯೂ ಜಾರಿ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹಾವು ಏಣಿ ಆಟವಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಸೋಂಕನ್ನು ಕಂಟ್ರೋಲ್ ಗೆ ತರಲು ಬಿಬಿಎಂಪಿ ಮುಂದಾಗಿದ್ದು, ಇಂದಿನಿಂದ ನಗರದಲ್ಲಿ ಟೈಟ್ ನೈಟ್ ಕರ್ಫ್ಯೂ ಜಾರಿ ಮಾಡಲು ಮುಂದಾಗಿದೆ.
ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದ್ದು, ರಾಜ್ಯದಲ್ಲೂ ಆತಂಕಕ್ಕೆ ಕಾರಣವಾಗಿದೆ.
ಅದರಲ್ಲೂ ನಗರದಲ್ಲಿ ಕೆಲ ದಿನಗಳಿಂದ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದು ಅಧಿಕಾರಿಗಳ ತಲೆ ಬಿಸಿ ಹೆಚ್ಚಿಸಿದ್ದು, ಇಂದಿನಿಂದ ನೈಟ್ ಕರ್ಫ್ಯೂ ಜಾರಿಗೆ ತೀರ್ಮಾನ ಮಾಡಿದ್ದಾರೆ.
ಇಂದಿನಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.
ಕರ್ಫ್ಯೂ ವೇಳೆ ಅನಾವಶ್ಯಕವಾಗಿ ಓಡಾಡುವವರಿಗೆ ಬಿಸಿ ಮುಟ್ಟಿಸಲು ಪೊಲೀಸರು ಕೂಡ ಸಜ್ಜಾಗಿದ್ದು, ಬೇಕಾಬಿಟ್ಟಿ ಓಡಾಡುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ.
ಇನ್ನು ನೈಟ್ ಶಿಫ್ಟ್ ಕೆಲಸ ಮಾಡುವ ಸಿಬ್ಬಂದಿಗಳಿಗೆ ಐಡಿ ಕಾರ್ಡ್ ಕಡ್ಡಾಯವಾಗಿತ್ತದೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವವರಿಗೆ ಅನುಮತಿ ನೀಡಲಾಗಿದೆ.









