ಕೊರೊನಾ ಹೆಚ್ಚಳ | ಕೇರಳಕ್ಕೆ ಪ್ರತ್ಯೇಕ ತಂಡ ಕಳುಹಿಸಿದ ಕೇಂದ್ರ Kerala saaksha tv
ತಿರುವನಂತಪುರಂ : ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ವಾರಾಂತ್ಯದ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.
ಸದ್ಯ ದೇಶದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಪೈಕಿ, ಅರ್ಧದಷ್ಟು ಕೇಸ್ ಗಳು ಕೇರಳದಲ್ಲೇ ಪತ್ತೆಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಹೀಗಾಗಿ ಕೇಂದ್ರ ಸರ್ಕಾರವು 6 ಸದಸ್ಯರ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಲು ತೀರ್ಮಾನ ಕೈಗೊಂಡಿದೆ. ಶೀಘ್ರದಲ್ಲೇ ಆ ತಂಡ ಕೇರಳಕ್ಕೆ ಭೇಟಿ ನೀಡಿ ಕೊರೊನಾ ಪರಿಸ್ಥಿತಿ ಪರಿಶೀಲನೆ ನಡೆಸಲಿದೆ.
ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದು, ಕೇರಳ ರಾಜ್ಯದಲ್ಲಿ ದಿನವೂ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ.
ಹೀಗಾಗಿ ತಜ್ಞರ ತಂಡ ಕೇರಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಲಿದೆ. ಕೊರೊನಾ ನಿರ್ವಹಣೆಯಲ್ಲಿ ರಾಜ್ಯದ ನಿರಂತರ ಪ್ರಯತ್ನಗಳಿಗೆ ತಂಡವು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.