ಕೋಲಾರ : ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮುಂದುವರಿಸುತ್ತಾ ಮರಣ ಮೃದಂಗ ಬಾರಿಸುತ್ತಾ ಸಾಗಿದೆ. ಅದರಂತೆ ಚಿನ್ನದನಾಡು ಕೋಲಾರದಲ್ಲಿ ಕೊರೊನಾಸುರ ಮೊದಲ ಬಲಿ ಪಡೆದಿದ್ದಾನೆ.
ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮದ 43 ವರ್ಷದ ಕೊರೊನಾ ಸೋಂಕಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಕಳೆದ ಒಂದು ವಾರದಿಂದ ಜಾಲಪ್ಪಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಕೆಜಿಎಫ್ ತಹಶೀಲ್ದಾರ್ ರಮೇಶ್ ಮಾಹಿತಿ ನೀಡಿದ್ದಾರೆ.
ಕಳೆದ 10 ದಿನಗಳ ಹಿಂದೆ ದೆಹಲಿಯಿಂದ ತೂಕಲ್ಲು ಗ್ರಾಮಕ್ಕೆ ಆಗಮಿಸಿದ್ದ ಈ ಮಹಿಳೆಗೆ ಕೆಮ್ಮು,ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಜಾಲಪ್ಪಾ ಆಸ್ಪತ್ರೆಗೆ ದಾಖಲಿಸಿ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಸೋಂಕಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆ ಅವರಿಗೆ ಜಾಲಪ್ಪ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ. ಈ ಮೂಲಕ ಕೋಲಾರ ಜಿಲ್ಲೆಯಲ್ಲಿ ಆತಂಕ ಮೂಡಿದೆ.
ಇನ್ನು ಕೋಲಾರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸೊಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 81 ಜನ ಸೋಂಕಿತರ ಪೈಕಿ, ಜಾಲಪ್ಪ ಆಸ್ಪತ್ರೆಯಲ್ಲಿಯೇ 14 ಜನ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ.








