ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೋನಾ ಮಹಾಮಾರಿಯ ಅಬ್ಬರ ಮುಂದುವರೆದಿದೆ. ನಿನ್ನೆ ಒಂದೇ ದಿನ ಸುಮಾರು 10 ಸಾವಿರ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಸೃಷ್ಟಿಸಿದೆ. ಇದರ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿ ಕೊರೊನಾ ಸುನಾಮಿಗೆ ಕೊಚ್ಚಿ ಹೋಗುವ ಅಪಾಯದಲ್ಲಿದೆ.
ಮಹಾರಾಷ್ಟ್ರ, ತಮಿಳುನಾಡು ಬಳಿಕ ದೇಶದಲ್ಲೇ ಅತಿಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕಕರಣ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ನವದೆಹಲಿಗೆ ಮುಂದಿನ ದಿನಗಳಲ್ಲಿ ಕೊರೊನಾ ಪ್ರವಾಹದಂತೆ ಅಪ್ಪಳಿಸಲಿದೆ. ಸದ್ಯ ದೆಹಲಿಯಲ್ಲಿ ಸುಮಾರು 27ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಜುಲೈ ಅಂತ್ಯದ ವೇಳಗೆ 5.5 ಲಕ್ಷ ದಾಟುವ ಸಾಧ್ಯತೆ ಇದೆ ಎಂದು ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರೇ ಆತಂಕ ವ್ಯಕ್ತಪಡಿಸಿದ್ದಾರೆ.
ಐದೂವರೆ ಲಕ್ಷ..ಏನಿದು ಲೆಕ್ಕಾಚಾರ..!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ಗಮನಿಸಿದರೆ ಮಹಾರಾಷ್ಟ್ರವನ್ನು ಹಿಂದಿಕ್ಕುವ ಎಲ್ಲಾ ಅಪಾಯದ ಸಾಧ್ಯತೆಯನ್ನು ದೆಹಲಿ ಸರ್ಕಾರ ಅಂದಾಜಿಸಿದೆ. ಸೋಮವಾರ ಒಂದೇ ದಿನ 1007 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕೊರೊನಾ ಸೋಂಕು ತಡೆಗೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಯಾವುದೇ ಕ್ರಮಕೈಗೊಂಡರೂ ಮಹಾಮಾರಿಗೆ ಅಂಕುಶ ಹಾಕಲು ಸಾಧ್ಯವಾಗುತ್ತಿಲ್ಲ. ಸದ್ಯ 29 ಸಾವಿರದ ಪಾಸಿಟಿವ್ ಪ್ರಕರಣಗಳ ಸನಿಹದಲ್ಲಿರುವ ದೆಹಲಿಯಲ್ಲಿ, ಇದೇ ತಿಂಗಳಾಂತಕ್ಕೆ 50 ಸಾವಿರ ಗಡಿ ದಾಟುವ ಸಾಧ್ಯತೆ ಇದೆ. ಹೀಗಾಗಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುವುದೇ ದೆಹಲಿ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.
80 ಸಾವಿರ ಬೆಡ್ ಎಲ್ಲಿಂದ ತರೋದು..?
ಸದ್ಯ ದೆಹಲಿಯಲ್ಲಿ ಕೊರೊನಾ ಸೋಂಕು ಹರಡುವಿಕೆ ಸಮುದಾಯ ಹಂತ ತಲುಪಿಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಜುಲೈ ಅಂತ್ಯಕ್ಕೆ 5.5 ಲಕ್ಷ ದಾಟುತ್ತೆ ಎಂದು ಅಂದಾಜಿಸಿರುವ ಇದರ ಹಿಂದಿನ ಲೆಕ್ಕಾಚಾರ. ಈಗಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ, ಮನೆ-ಮನೆಗಳಿಗೆ ಹರಡುತ್ತಿದ್ದು, ಇದೇ ಸ್ಥಿತಿ ರಾಷ್ಟ್ರ ರಾಜಧಾನಿ ದೆಹಲಿಗೂ ಬರುವ ಅಪಾಯ ಎದುರಾಗಿದೆ.
ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕೊರೊನಾ ಹರಡುವಿಕೆ ಹೆಚ್ಚುತ್ತಿದ್ದು ಜೂನ್ ಅಂತ್ಯಕ್ಕೆ ಆಸ್ಪತ್ರೆಗಳಲ್ಲಿ 15 ಸಾವಿರ ಬೆಡ್ನ ಅಗತ್ಯವಿದೆ ಎಂಬ ವಿಚಾರ ಚರ್ಚೆಯಾಗಿದೆ.
ಜುಲೈ ಅಂತ್ಯಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ 5.5 ಲಕ್ಷ ದಾಟಿದರೆ ಎಲ್ಲಿಂದ ಚಿಕಿತ್ಸೆ ನೀಡುವುದು ಎಂದ ಚಿಂತೆ ದೆಹಲಿ ಸರ್ಕಾರವನ್ನು ಕಾಡುತ್ತಿದೆ. ಈ ಸಂಖ್ಯೆಗೆ ಹೋಲಿಸಿದರೂ ಜುಲೈ ಅಂತ್ಯಕ್ಕೆ ದೆಹಲಿಯಲ್ಲಿ 80 ಸಾವಿರ ಬೆಡ್ಗಳ ಅಗತ್ಯ ಎದುರಾಗಲಿದೆ.
ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ದೆಹಲಿ ಸರ್ಕಾರ ಮುಂದಾಗಿದ್ದರೂ, ಈ ನಿರ್ಧಾರವನ್ನು ಒಪ್ಪದ ಲೆಫ್ಟಿನೆಂಟ್ ಗವರ್ನರ್ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನಲಾಗಿದೆ.








