ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಅಧಿಕಾರಿಗಳಿಗೆ ಶಾಕ್ ಕೊಟ್ಟ ಸಿಂಗಾಪುರ ಸರ್ಕಾರ
ಸಿಂಗಾಪುರ : ವಿಶ್ವಾದ್ಯಂತ ಕೆಲವೆಡೆ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ರೆ ಕೆಲವೆಡೆ 3ನೇ ಅಲೆಯ ಮುನ್ಸೂಚನೆ ಸಿಕ್ಕಿದೆ. ನಮ್ಮ ಭಾರತದಲ್ಲಿಯೂ ಕೋವಿಡ್ ಏರಿಳಿತ ಮುಂದುವರೆದಿದೆ. ಮತ್ತೊಂದೆಡೆ ಸಿಂಗಾಪುರ , ರಷ್ಯಾ , ಬ್ರಿಷನ್ ಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದೆ. ಹಾಗೆಯೇ ಇಡೀ ವಿಶ್ವಾದ್ಯಂತ ಕೊರೊನಾ ಲಸಿಕೆ ಅಭಿಯಾನವೂ ವೇಗ ಪಡೆದಿದೆ. ಈ ನಡುವೆ ಲಸಿಕೆ ಪಡೆಯದದ ಅಧಿಕಾರಿಗಳಿಗೆ ಸಿಂಗಾಪುರ ಸರ್ಕಾರ ಶಾಕ್ ನೀಡಿದೆ. ಲಸಿಕೆ ಪಡೆಯಲು ವೈದ್ಯಕೀಯವಾಗಿ ಅರ್ಹರಾಗಿದ್ದರೂ, ಲಸಿಕೆ ಹಾಕಿಸಿಕೊಳ್ಳದ ಸರ್ಕಾರಿ ಅಧಿಕಾರಿಗಳಿಗೆ ವೇತನ ರಹಿತ ರಜೆ ಮೇಲೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ. ಸಂಪೂರ್ಣ ಲಸಿಕೆ ಪಡೆದ ಉದ್ಯೋಗಿಗಳಿಗೆ ಅಥವಾ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು 270 ದಿನಗಳು ಕಳೆದಿರುವವರಿಗೆ ಮಾತ್ರ ಜನವರಿ 1, 2022 ರಿಂದ ಕೆಲಸದ ಸ್ಥಳಗಳಿಗೆ ತೆರಳಲು ಅನುಮತಿ ನೀಡುವುದಾಗಿ ಆರೋಗ್ಯ ಸಚಿವಾಲಯವು ಅಕ್ಟೋಬರ್ 23 ರಂದು ಘೋಷಿಸಿತ್ತು.
ಸಚಿವಾಲಯದ ಈ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಸೇವಾ ವಲಯದ ವಕ್ತಾರ, ಜನವರಿ 1 ರಿಂದ ಕೆಲಸಕ್ಕೆ ಮರಳಲು ಅನುಮತಿಸಿದರೆ, ಲಸಿಕೆ ಹಾಕಿಸಿಕೊಳ್ಳದ ಅಧಿಕಾರಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುತ್ತೇವೆ ಎಂದು ಹೇಳಿದರು. ಆದರೆ, ವೈದ್ಯಕೀಯವಾಗಿ ಅರ್ಹರಾಗಿದ್ದರೂ ಕೋವಿಡ್ ಲಸಿಕೆ ಪಡೆಯಲು ಮುಂದಾಗದಿದ್ದರೆ, ಅಂಥ ಅಧಿಕಾರಿಗಳಿಗೆ ವೇತನ ರಹಿತ ರಜೆಯ ಮೇಲೆ ಕಳಿಸಲಾಗುತ್ತದೆ ಎಂಬ ಪಿಎಸ್ ಡಿಯ ಹೇಳಿಕೆ ಉಲ್ಲೇಖಿಸಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನೂ ಲಸಿಕೆ ಪಡೆಯಲು ವೈದ್ಯಕೀಯವಾಗಿ ಅರ್ಹರಾಗಿದ್ದು, ಲಸಿಕೆ ಪಡೆಯಲು ಒಪ್ಪದಿದ್ದರೆ, ಅಂಥವರಿಗೆ ವೇತನ ರಹಿತ ರಜೆ ಅಥವಾ ಗುತ್ತಿಗೆ ಆಧಾರದ ನೌಕರರಿಗೆ ಗುತ್ತಿಗೆ ನವೀಕರಣವಿಲ್ಲದೇ ಒಪ್ಪಂದ ರದ್ದುಗೊಳಿಸಬಹುದು ಎಂದು ಎಚ್ಚರಿಕೆ ನೀಡಿರೋದಾಗಿ ತಿಳಿದುಬಂದಿದೆ.