16ನೇ ಆವೃತ್ತಿಯ ಐಪಿಎಲ್ ರೋಚಕ ಘಟ್ಟ ತಲುಪಿದ್ದು ಇಂದು ನಾಲ್ಕು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಕ್ವಾಲಿಫೈಯರ್ ಒಂದರಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಮಂಗಳವಾರ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಐಪಿಎಲ್ನ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟ ಕುತೂಹಲ ಮೂಡಿಸಿವೆ. ಈ ಪಂದ್ಯ ಒಳ್ಳೆಯ ಲಯದಲ್ಲಿರುವ ಶುಭ್ಮಮನ್ ಗಿಲ್ ಬ್ಯಾಟಿಂಗ್ ಮತ್ತು ಧೋನಿಯ ಚಾಣಾಕ್ಷ ನಾಯಕತ್ವ ನಡುವಿನ ಹೋರಾಟವಾಗಿದೆ. ಈ ಋತುವಿನಲ್ಲಿ ಗುಜರಾತ್ ತಂಡ ಚೆಪಾಕ್ ಅಂಗಳದಲ್ಲಿ ಆಡಿಲ್ಲ.ಚೆನ್ನೈ ತಂಡ ಆಡಿದ 7 ಪಂದ್ಯಗಳಲ್ಲಿ ಪಿಚ್ ಒಂದೇ ರೀತಿ ವರ್ತಿಸಲಿಲ್ಲ. ಆತಿಥೇಯ ಚೆನ್ನೈ ತಂಡಕ್ಕೂ ಇದು ಅಚ್ಚರಿ ನೀಡಿತು. ಗುಜರಾತ್ ತಂಡ ಎರಡನೆ ಆವೃತ್ತಿ ಆಡುತ್ತಿದೆ. ಚೆನ್ನೈ ತಂಡಕ್ಕೆ ಒಳ್ಳೆಯ ಅನುಭವವಿದೆ.
ಗುಜರಾತ್ ತಂಡ ಒಳ್ಳೆಯ ಆಡಳಿತವನ್ನು ಹೊಂದಿದೆ. ಆಶೀಶ್ ನೆಹ್ರಾ, ಗ್ಯಾರಿ ಕಸ್ಟರ್ನ್ ಮತ್ತು ವಿಕ್ರಮ್ ಸೋಲಂಕಿ ತಂಡದ ಯಶಸ್ಸಿನ ಹಿಂದಿದ್ದಾರೆ. ಧೋನಿಯ ನಾಯಕತ್ವ ಗುಣ ಹೊಂದಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ಆಶೀಶ್ ನೆಹ್ರಾ ಇಂದಿನ ಪಂದ್ಯದಲ್ಲಿ ಹಚ್ಚೇನು ಬದಲಾವಣೆ ಮಾಡುವುದಿಲ್ಲ. ನಿಧಾನಗತಿಯಿಂದ ಕೂಡಿರುವ ಚೆಪಾಕ್ ಅಂಗಳ ಗುಜರಾತ್ ತಂಡಕ್ಕೆ ಸವಾಲಾಗಿದೆ. ಪವರ್ಪ್ಲೇನಲ್ಲಿ ದೀಪಕ್ ಚಾಹರ್ ಮತ್ತು ಡೆತ್ ಓವರ್ನಲ್ಲಿ ಮಥೀಶಾ ಪತಿರನ ಅವರನ್ನು ಹೇಗೆ ಎದುರಿಸುತ್ತಾರೆ ಅನ್ನೋದು ಪಂದ್ಯದ ಫಲಿತಾಂಶವನ್ನು ನಿರ್ಧಾರಿಸಲಿದೆ. ದಸುನ್ ಶನಕಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದ್ದು ಪತಿರನ ಮತ್ತು ಸ್ಪಿನ್ನರ್ ಮಹೀಶ್ ತೀಕ್ಷ್ಣ ಅವರನ್ನು ಎದುರಿಸಲು ತಂಡಕ್ಕೆ ಸೇರಿಸಿಕೊಳ್ಳಬಹುದು.
ಶನಕಾ ಅವರನ್ನು ಆಲ್ರೌಂಡರ್ರಾಗಿಯೂ ಬಳಸಬಹುದು.ಸಾಯಿ ಕಿಶೋರ್ ಅವರನ್ನು ಟಾಸ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬಹುದು.
ಶನಕಾ ಸ್ಥಾನದಲ್ಲಿ ಜೋಶುಹಾ ಲಿಟ್ಲ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಯಶ್ ದಯಾಳ್ ಸ್ಥಾನದಲ್ಲಿ ಸಾಯಿ ಕಿಶೋರ್ ಅವರನ್ನು ಆಡಿಸಬಹುದು. ಚೆನ್ನೈ ತಂಡಕ್ಕೆ ಡೆವೊನ್ ಕಾನ್ವೆ ಮತ್ತು ಋತುರಾಜ್ ಗಾಯಕ್ವಾಡ್ ಜೋಡಿ ಪ್ರಮುಖವಾಗಿದೆ. ಅಜಿಂಕ್ಯ ರಹಾನೆ ಹಾಗೂ ಶಿವಂ ದುಬೆ ಬ್ಯಾಟಿಂಗ್ ಕ್ರಮಾಂಕದ ಅಸ್ತ್ರರಾಗಿದ್ದಾರೆ.
ಕಾನ್ವೆ ಮತ್ತು ಗಾಯಕ್ವಾಡ್ ಒಳ್ಳೆಯ ಆರಂಭ ನೀಡಿದ್ದಾರೆ. ಆದರೆ ಮಧ್ಯಮ ಕ್ರಮಾಂಕ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಗುಜರಾತ್ ಪರ ವೇಗಿ ಮೊಹ್ಮದ್ ಶಮಿ ಹಾಗೂ ರಶೀದ್ ಖಾನ್ 24 ವಿಕೆಟ್ ವಿಕೆಟ್ ಪಡೆದಿದ್ದಾರೆ. ಗುಜರಾತ್ ಬೌಲರ್ಗಳೆದುರು ಚೆನ್ನೈ ಬ್ಯಾಟರ್ಗಳಿಗೆ ಅಷ್ಟು ಸುಲಭವಿಲ್ಲ. ಸಿಎಸ್ಕೆ ತಂಡದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿಲ್ಲ. ಈ ಪಂದ್ಯ ಸ್ಪಿನ್ನರ್ಗಳ ನಡುವಿನ ಕದನವೂ ಆಗಿದೆ. ಚೆನ್ನೈ ಪರ ರವೀಂದ್ರ ಜಡೇಜಾ, ಮೋಯಿನ್ ಅಲಿ ಮತ್ತು ತೀಕ್ಷ್ಣ ದೊಡ್ಡ ಪಾತ್ರವನ್ನು ನಿರ್ವಹಿಸಲಿದ್ದಾರೆ. ಗುಜರಾತ್ ಪರ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಸ್ಪಿನ್ ಅಸ್ತ್ರವಾಗಿದ್ದಾರೆ.