ವಿಶ್ವ ಕ್ರಿಕೆಟ್ನಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಅಫ್ಘಾನಿಸ್ತಾನ ಪ್ರಸಕ್ತ ಏಕದಿನ ವಿಶ್ವಕಪ್ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಲೋಕಕ್ಕೆ ದೊಡ್ಡ ಸಂದೇಶವನ್ನ ನೀಡಿ 2023ರ ವಿಶ್ವಕಪ್ ಅಭಿಯಾನವನ್ನ ಮುಗಿಸಿದೆ.
ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಬಲಿಷ್ಠ ತಂಡಗಳಿಗೆ ಸೋಲುಣಿಸುವ ಮೂಲಕ ಎಲ್ಲರ ಗಮನ ಸೆಳೆಯಿತು. ಟೂರ್ನಿಯಲ್ಲಿ ಆಡಿದ ಒಂಭತ್ತು ಪಂದ್ಯಗಳಲ್ಲಿ ನಾಲ್ಕು ಗೆಲುವು ಸಾಧಿಸಿದ ಅಫ್ಘಾನ್ ತಂಡ, ಸೆಮಿಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಕೊನೆವರೆಗೂ ಛಲಬಿಡದೆ ಹೋರಾಟ ನಡೆಸಿತು. ಆದರೆ ತನ್ನ ಕಡೆಯ ಎರಡು ಲೀಗ್ ಪಂದ್ಯಗಳಲ್ಲಿ ಎದುರಾದ ಸೋಲಿನಿಂದಾಗಿ ಸೆಮೀಸ್ ಪ್ರವೇಶಿಸುವ ಕನಸು ನನಸಾಗಲಿಲ್ಲ.
ಆದರೆ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ಆಟಗಾರರ ನೀಡಿದ ಪ್ರದರ್ಶನ ವಿಶ್ವ ಕ್ರಿಕೆಟ್ಗೆ ದೊಡ್ಡ ಸಂದೇಶವನ್ನ ನೀಡುವಲ್ಲಿ ಯಶಸ್ವಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲೂ ಸಂಘಟಿತ ಪ್ರದರ್ಶನ ನೀಡಿದ ಅಫ್ಘಾನ್ ಆಟಗಾರರು ತಂಡಕ್ಕೆ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟರು. ಇದರ ಪರಿಣಾಮ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ತಂಡಗಳಿಗೆ ಮಣ್ಣುಮುಕ್ಕಿಸಲು ಸಾಧ್ಯವಾಯಿತು.
ಬಾಂಗ್ಲಾದೇಶ ವಿರುದ್ಧ 6 ವಿಕೆಟ್ಗಳ ಸೋಲಿನೊಂದಿಗೆ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಿದ ಅಫ್ಘಾನಿಸ್ತಾನ, ನಂತರ ಭಾರತದ ವಿರುದ್ಧವೂ ಸೋಲಿನ ಆಘಾತ ಕಂಡಿತು. ಆದರೆ 3ನೇ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ದೊರೆತ 69 ರನ್ಗಳ ಅದ್ಭುತ ಗೆಲುವು ಅಫ್ಘಾನಿಸ್ತಾನ ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿತು. ಇದೇ ಆತ್ಮವಿಶ್ವಾಸದೊಂದಿಗೆ ಪಾಕಿಸ್ತಾನ, ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿ ಸೆಮೀಸ್ ರೇಸ್ನಲ್ಲಿ ಕಾಣಿಸಿಕೊಂಡಿತು.
ತಂಡದ ಪ್ರಮುಖ ಆಟಗಾರರಾದ ರಶೀದ್ ಖಾನ್(11 ವಿಕೆಟ್ಗಳು), ಇಬ್ರಾಹಿಂ ಝದ್ರಾನ್(376 ರನ್ಗಳು), ಅಜ್ಮತ್ ಒಮರ್ಜಾಯಿ(353 ರನ್ಗಳು), ರಹಮತ್ ಶಾ(320 ರನ್ಗಳು) ಹಾಗೂ ಹಸ್ಮತ್ ಶಹೀದಿ(310) ಅವರುಗಳು ಗಮನಾರ್ಹ ಪ್ರದರ್ಶನದೊಂದಿಗೆ ಅಫ್ಘಾನ್ ತಂಡದ ಯಶಸ್ಸಿಗೆ ಕಾರಣರಾದರು. ಇವರುಗಳ ಅದ್ಭುತ ಪ್ರದರ್ಶದಿಂದಾಗಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿರುವ ಅಫ್ಘಾನ್ ತಂಡ, 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದೆ.
CWC 2023, Afghanistan, ODI Cricket, World Cup, Rashid Khan