ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಜಯದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ, ಸೆಮೀಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯಂತೆ ಫೈನಲ್ ಪ್ರವೇಶಿಸಿದೆ. ಈ ನಡುವೆ ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತದ ಮ್ಯಾನೇಜ್ಮೆಂಟ್ ಪ್ರತಿ ಪಂದ್ಯದ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ “ಬೆಸ್ಟ್ ಫೀಲ್ಡರ್” ಪದಕ ನೀಡುವ ಹೊಸದೊಂದು ಪ್ರಯತ್ನ ಆರಂಭಿಸಿದೆ. ಹೀಗಾಗಿ ವಿಶ್ವಕಪ್‌ನಲ್ಲಿ ಭಾರತ ಆಡಿರುವ ಏಕದಿನ ವಿಶ್ವಕಪ್‌ನ ಎಲ್ಲಾ ಹತ್ತು ಪಂದ್ಯಗಳಲ್ಲಿ “ಬೆಸ್ಟ್ ಫೀಲ್ಡರ್” ಪದಕ ಪಡೆದಿರುವ ಆಟಗಾರರ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ತೋರಿದ ಅದ್ಭುತ ಫೀಲ್ಡಿಂಗ್ ಮೂಲಕ “ಬೆಸ್ಟ್ ಫೀಲ್ಡರ್” ಪದಕ ಪಡೆದು ಮಿಂಚಿದರು.
ಶಾರ್ದೂಲ್ ಥಾಕೂರ್: ದೆಹಲಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡರ್ ಶಾರ್ದೂಲ್ ಥಾಕೂರ್ “ಬೆಸ್ಟ್ ಫೀಲ್ಡರ್” ಪದಕ ಪಡೆದುಕೊಂಡರು.
ಕೆಎಲ್ ರಾಹುಲ್: ಭಾರತ ತಂಡದ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಕನ್ನಡಿಗ ಕೆಎಲ್ ರಾಹುಲ್, ಸತತವಾಗಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ “ಬೆಸ್ಟ್ ಫೀಲ್ಡರ್” ಪದಕ ಪಡೆಯುವ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ರವೀಂದ್ರ ಜಡೇಜಾ: ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ಆಗಿರುವ ರವೀಂದ್ರ ಜಡೇಜಾ ಕೂಡ ತಮ್ಮ ಫೀಲ್ಡಿಂಗ್‌ನಲ್ಲಿ ಕಮಾಲ್ ಮಾಡಿದ್ದಾರೆ. ಲೀಗ್ ಹಂತದಲ್ಲಿ ಬಾಂಗ್ಲಾದೇಶ ವಿರುದ್ಧದ “ಬೆಸ್ಟ್ ಫೀಲ್ಡರ್” ಪದಕ ಪಡೆದಿದ್ದ ಜಡೇಜಾ, ನ್ಯೂಜಿ಼ಲೆಂಡ್ ವಿರುದ್ಧ ಪಡೆದ ಸೆಮಿಫೈನಲ್‌ನಲ್ಲಿ ಕೂಡ ಶ್ರೇಷ್ಠ ಫೀಲ್ಡಿಂಗ್ ಪ್ರದರ್ಶನದ ಮೂಲಕ “ಬೆಸ್ಟ್ ಫೀಲ್ಡರ್” ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೇಯಸ್ ಅಯ್ಯರ್: ಯುವ ಬ್ಯಾಟರ್ ಶ್ರೇಯಸ್ ಅಯ್ಯರ್, ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲೂ ತಂಡದ ಯಶಸ್ವಿಗೆ ಶ್ರಮಿಸಿದ್ದಾರೆ. ಶ್ರೀಲಂಕಾ ಹಾಗೂ ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಎರಡು ಬಾರಿ “ಬೆಸ್ಟ್ ಫೀಲ್ಡರ್” ಪದಕ ಪಡೆಯುವ ಮೂಲಕ ತಮ್ಮ ಫೀಲ್ಡಿಂಗ್ ಚಾಣಾಕ್ಷತೆ ಪ್ರದರ್ಶಿಸಿದ್ದಾರೆ.
ರೋಹಿತ್ ಶರ್ಮಾ: ವಿಶ್ವಕಪ್‌ನಲ್ಲಿ ಭಾರತ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿರುವ ನಾಯಕ ರೋಹಿತ್ ಶರ್ಮಾ, ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲೂ ತಂಡಕ್ಕೆ ಸ್ಪೂರ್ತಿ ತುಂಬಿದ್ದಾರೆ. ಸೌತ್ ಆಫ್ರಿಕಾದ ವಿರುದ್ಧ ಉತ್ತಮ ಫೀಲ್ಡಿಂಗ್ ಪ್ರದರ್ಶಿಸುವ ಮೂಲಕ “ಬೆಸ್ಟ್ ಫೀಲ್ಡರ್” ಪದಕ ಪಡೆದು ಮಿಂಚಿದರು.
ಸೂರ್ಯಕುಮಾರ್ ಯಾದವ್: ನೆದರ್ಲೆಂಡ್ಸ್ ವಿರುದ್ದದ ಪಂದ್ಯದಲ್ಲಿ ಉತ್ತಮ ಫೀಲ್ಡಿಂಗ್ ಪ್ರದರ್ಶನದ ಮೂಲಕ ಸೂರ್ಯಕುಮಾರ್ ಯಾದವ್ “ಬೆಸ್ಟ್ ಫೀಲ್ಡರ್” ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
CWC 2023, Team India, World Cup, Best Fielder, ODI Cricket