ಜಗತ್ತಿಗೆ ಕ್ರಿಕೆಟ್ ಕ್ರೀಡೆಯನ್ನ ಪರಿಚಯಿಸಿದ ಹೆಗ್ಗಳಿಕೆ ಹೊಂದಿರುವ ಇಂಗ್ಲೆಂಡ್, ಏಕದಿನ ವಿಶ್ವಕಪ್‌ನಲ್ಲಿ ಮತ್ತೊಂದು ಮರೆಯಲಾಗದ ಸೋಲಿನ ಆಘಾತ ಕಂಡಿದೆ.
ಪ್ರಸಕ್ತ ಏಕದಿನ ವಿಶ್ವಕಪ್-2023 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಶ್ರೇಷ್ಠ ಪ್ರದರ್ಶನ ನೀಡುವ ನಿರೀಕ್ಷೆ ಮೂಡಿಸಿತ್ತು. ಆದರೆ ನ್ಯೂಜಿ಼ಲೆಂಡ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಸೋಲಿನ ಆರಂಭ ಕಂಡಿದ್ದ ಇಂಗ್ಲೆಂಡ್, ನಂತರ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿ ಕಮ್‌ಬ್ಯಾಕ್ ಮಾಡಿತ್ತು. ಹೀಗಾಗಿ ಅಫ್ಘಾನಿಸ್ತಾನ್ ವಿರುದ್ಧವೂ ಸುಲಭದ ಗೆಲುವು ಸಾಧಿಸುವ ನಿರೀಕ್ಷೆ ಮೂಡಿತ್ತು.
ಆದರೆ ಇದೇ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಹಾಲಿ ಚಾಂಪಿಯನ್ನರು ಅಫ್ಘಾನಿಸ್ತಾನದ ಸಂಘಟಿತ ಆಟಕ್ಕೆ ಶರಣಾಗಿ 69 ರನ್‌ಗಳ ಆಘಾತಕಾರಿ ಸೋಲು ಕಂಡಿದೆ. ಅಫ್ಘಾನ್ ವಿರುದ್ಧ ಎದುರಾದ ಹೀನಾಯ ಸೋಲು ಒಂದೆಡೆ ಕ್ರಿಕೆಟ್ ಜನಕರ ಆತ್ಮವಿಶ್ವಾಸ ಕುಗ್ಗುವಂತೆ ಮಾಡಿದ್ದರೆ. ಇದರ ಜೊತೆಗೆ ಏಕದಿನ ವಿಶ್ವಕಪ್‌ನಲ್ಲಿ ಆಂಗ್ಲರಿಗೆ ಮರೆಯಲಾಗದ ಸೋಲಿನ ಕಹಿ ನೆನಪು ಉಳಿಯುವಂತೆ ಮಾಡಿದೆ.
ಪ್ರಸಕ್ತ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಅಚ್ಚರಿ ಸೋಲು ಈ ಹಿಂದಿನ ಏಕದಿನ ವಿಶ್ವಕಪ್‌ಗಳಲ್ಲಿ ಇಂಗ್ಲೆಂಡ್‌ಗೆ ಎದುರಾದ ಆಘಾತಕಾರಿ ಸೋಲಿನ ನೆನಪು ಮಾಡಿದೆ. ಈ ಹಿಂದೆ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಐರ್ಲೆಂಡ್ ಅಚ್ಚರಿಯ ಸೋಲಿನ ಶಾಕ್ ನೀಡಿತ್ತು. ಇದಾದ ಬಳಿಕ 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಆಟಗಾರರು ಇಂಗ್ಲೆಂಡ್ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದರು.
ಆದರೆ ಬಾಂಗ್ಲಾ ವಿರುದ್ಧ ಅನುಭವಿಸಿದ ಆಘಾತಕಾರಿ ಸೋಲಿನಿಂದ ಪಾಠ ಕಲಿತ ಇಂಗ್ಲೆಂಡ್, 2019ರ ವಿಶ್ವಕಪ್‌ನಲ್ಲಿ ಶ್ರೇಷ್ಠ ಪ್ರದರ್ಶನವನ್ನ ನೀಡಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೇ ಆತ್ಮವಿಶ್ವಾಸ ಹಾಗೂ ನಿರೀಕ್ಷೆ ಇಟ್ಟುಕೊಂಡು 2023ರ ವಿಶ್ವಕಪ್‌ಗೆ ಎಂಟ್ರಿಕೊಟ್ಟಿದ್ದ ಇಂಗ್ಲೆಂಡ್, ಇದೀಗ ನ್ಯೂಜಿ಼ಲೆಂಡ್ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಸೋಲನುಭವಿಸುವ ಮೂಲಕ ಮುಖಭಂಗ ಅನುಭವಿಸಿದೆ.
CWC 2023, England, World Cup, ODI Cricket, Afghanistan