ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಸತತ ಗೆಲುವಿನೊಂದಿಗೆ ಶ್ರೀಲಂಕಾ ಗೆಲುವಿನ ಲಯಕ್ಕೆ ಮರಳಿರುವ ಸಂತಸದ ಜೊತೆಗೆ ಲಂಕಾ ಪಡೆಯ ಆರಂಭಿಕ ಬ್ಯಾಟರ್ ಪತುಮ್ ನಿಸ್ಸಂಕಾ, 2023ರ ಎಲೈಟ್ ಲಿಸ್ಟ್ ಸೇರಿಕೊಂಡಿದ್ದಾರೆ.
ಶ್ರೀಲಂಕಾ ತಂಡದ ಪ್ರಮುಖ ಬ್ಯಾಟರ್ ಆಗಿರುವ ಪತುಮ್ ನಿಸ್ಸಂಕಾ, 2023ರಲ್ಲಿ ಉತ್ತಮ ಬ್ಯಾಟಿಂಗ್ ಫಾರ್ಮ್ ಹೊಂದಿದ್ದು, ಪ್ರಸಕ್ತ ಏಕದಿನ ವಿಶ್ವಕಪ್ನಲ್ಲೂ ಇದೇ ಪ್ರದರ್ಶನವನ್ನ ಮುಂದುವರಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ಪಡೆ, ಅದ್ಭುತ ಕಮ್ಬ್ಯಾಕ್ ಮಾಡುವಲ್ಲಿ ಯುವ ಬ್ಯಾಟರ್ ಪತುಮ್ ನಿಸ್ಸಂಕಾ ಪ್ರಮುಖ ಪಾತ್ರವಹಿಸಿದ್ದಾರೆ. ತಮ್ಮ ಶ್ರೇಷ್ಠ ಬ್ಯಾಟಿಂಗ್ನ ಮೂಲಕ ತಂಡಕ್ಕೆ ಆಸರೆಯಾಗಿರುವ ನಿಸ್ಸಂಕಾ, ಇದೀಗ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಜೊತೆಗೆ 2023ರ ಎಲೈಟ್ ಲಿಸ್ಟ್ ಸೇರಿಕೊಂಡಿದ್ದಾರೆ.
ಟೂರ್ನಿಯಲ್ಲಿ ಆರಂಭದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿದ್ದ ನಿಸ್ಸಂಕಾ, ನಂತರದ ಪಂದ್ಯಗಳಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಟೂರ್ನಿಯಲ್ಲಿ ಸತತವಾಗಿ ನಾಲ್ಕು ಅರ್ಧಶತಕ ಸಿಡಿಸಿರುವ ನಿಸ್ಸಂಕಾ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಜೇಯ 77 ರನ್ಗಳಿಸಿ, ಜವಾಬ್ದಾರಿಯ ಆಟದಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ತಮ್ಮ ಈ ಇನ್ನಿಂಗ್ಸ್ನೊಂದಿಗೆ 2023ರಲ್ಲಿ ಏಕದಿನ ಕ್ರಿಕೆಟ್ನಲ್ಲಿ 1000 ರನ್ಗಳನ್ನ ಪೂರೈಸಿದ ಪತುಮ್ ನಿಸ್ಸಂಕಾ, ಆ ಮೂಲಕ ಭಾರತದ ಯುವ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್(1325 ರನ್ಗಳು) ಜೊತೆಗೆ ಎರಡನೇ ಆಟಗಾರನಾಗಿ ಎಲೈಟ್ ಲಿಸ್ಟ್ ಸೇರಿದ್ದಾರೆ. ಈ ವರ್ಷ ಆಡಿರುವ 25 ಪಂದ್ಯಗಳಲ್ಲಿ 48.27ರ ಸರಾಸರಿಯಲ್ಲಿ 1062* ರನ್ಗಳಿಸಿದ್ದಾರೆ. 2023ರ ವಿಶ್ವಕಪ್ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ನಿಸ್ಸಂಕಾ, 60.75ರ ಸರಾಸರಿಯಲ್ಲಿ 243 ರನ್ಗಳಿಸಿದ್ದು, 4 ಅರ್ಧಶತಕ ದಾಖಲಿಸಿದ್ದು, ಟೂರ್ನಿಯ ಮುಂದಿನ ಪಂದ್ಯಗಳಲ್ಲೂ ಇದೇ ಬ್ಯಾಟಿಂಗ್ ಲಯವನ್ನ ಮುಂದುವರಿಸುವ ನಿರೀಕ್ಷೆ ಹೊಂದಿದ್ದಾರೆ.
CWC 2023, Sri Lanka, Pathum Nissanka, Shubman Gill, World Cup