ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿಯಾಗಿರುವ ನಟ ದರ್ಶನ್ (Darshan) ಬಳಿಯಿರುವ ಗನ್ ಲೈಸೆನ್ಸ್ ನ್ನು ಪೊಲೀಸರು ತಾತ್ಕಾಲಿಕವಾಗಿ ರದ್ದು ಮಾಡಿದ್ದಾರೆ. ಈ ಕುರಿತು ಪೊಲೀಸ್ ಕಮಿಷನರ್ ದಯಾನಂದ್ ಹೇಳಿದ್ದಾರೆ.
ಮೂರು ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷೆ ವಿಧಿಸಬಹುದಾದ ಕೇಸ್‍ನಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಬಳಿ ಲೈಸೆನ್ಸ್ ಇರುವ ಗನ್ ಇದ್ದರೆ ಕೂಡಲೇ ವಶಕ್ಕೆ ಪಡೆಯಲಾಗುತ್ತದೆ. ಅಲ್ಲದೇ, ಆ ವ್ಯಕ್ತಿಯ ಲೈಸೆನ್ಸ್ ರದ್ದು ಮಾಡಬಹುದಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‍ನಲ್ಲಿ ಲೈಸೆನ್ಸ್ ಗನ್ ಬಳಕೆ ಮಾಡಿರುವುದು ಎಲ್ಲಿಯೂ ಕಂಡು ಬಂದಿಲ್ಲ. ಆದರೆ, ತಾತ್ಕಾಲಿಕವಾಗಿ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಅಮಾನತ್ತಿನಲ್ಲಿಡಲು ನಿರ್ಧರಿಸಲಾಗಿದೆ.
ಗನ್ ಲೈಸೆನ್ಸ್ ರದ್ದು ಮಾಡಲು ಈಗಾಗಲೇ ಪೊಲೀಸರು ನೋಟಿಸ್ ನೀಡಿದ್ದರು. ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಗನ್ ಇರುವುದರಿಂದ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನ ಇದೆ. ಹೀಗಾಗಿ ನಿಮ್ಮ ಲೈಸೆನ್ಸ್ ರದ್ದು ಮಾಡಬೇಕಿದೆ ಎಂದು ನೋಟಿಸ್ ನಲ್ಲಿ ಹೇಳಲಾಗಿತ್ತು. ಇದಕ್ಕೆ ದರ್ಶನ್ ಪ್ರತಿಕ್ರಿಯೆ ನೀಡಿ, ನಾನು ಸೆಲೆಬ್ರಿಟಿ ಆಗಿರುವುದರಿಂದ ಆತ್ಮರಕ್ಷಣೆಗೆ ಗನ್ ಅವಶ್ಯಕತೆ ಇದೆ. ನನ್ನ ಮೇಲಿರುವ ಕೇಸ್ ನ ಸಮಯದಲ್ಲಿ ಆ ಗನ್ ಬಳಕೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಗನ್ ದುರ್ಬಳಕೆ ಮಾಡಿಕೊಳ್ಳಲ್ಲ. ಹೀಗಾಗಿ ಮುಂದುವರೆಸಬೇಕೆಂದು ಮನವಿ ಮಾಡಿದ್ದರು. ಆದರೆ, ಪೊಲೀಸರು ಲೆಸೆನ್ಸ್ ಅನುಮತಿಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದ್ದಾರೆ.








