81 ಉಗ್ರರಿಗೆ ಮರಣದಂಡನೆ ಶಿಕ್ಷೆ- Saaksha Tv
ಸೌದಿ ಅರೇಬಿಯಾ: ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ 81 ಅಪರಾಧಿಗಳಿಗೆ ಸೌದಿ ಅರೇಬಿಯಾ ಒಂದೇ ದಿನ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ.
ಹತ್ಯೆಗಳು, ಪ್ರಾರ್ಥನೆ ಸ್ಥಳಗಳ ಮೇಲಿನ ದಾಳಿಗಳು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡ 81 ಜನರಿಗೆ ಮರಣದಂಡನೆ ವಿದಿಸಿದ್ದು, ಗಲ್ಲು ಶಿಕ್ಷೆಗೆ ಒಳಗಾದವರಲ್ಲಿ 81 ಮಂದಿಯಲ್ಲಿ 73 ಮಂದಿ ಸೌದಿ ಸೇರಿದವರು. ಹಾಗೇ ಯೆಮನ್ಗೆ ಸೇರಿದ ಏಳು ಮಂದಿ ಮತ್ತು ಸಿರಿಯಾಗೆ ಸೇರಿದ ಒಬ್ಬರಿದ್ದಾರೆ. ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರಿಗೆ ಶನಿವಾರ ಶಿಕ್ಷೆ ನೀಡಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.
ಅಲ್ಲದೇ ಮರಣದಂಡನೆಗೆ ಒಳಗಾದವರಲ್ಲಿ ಅಲ್ ಖೈದಾ, ಇಸ್ಲಾಮಿಕ್ ಸ್ಟೇಟ್ ಗುಂಪಿನ ಭಯೋತ್ಪಾದಕರೂ ಸೇರಿದ್ದಾರೆ. ಈ 81 ಮಂದಿಯನ್ನು ಎಲ್ಲಿ ನೇಣಿಗೆ ಏರಿಸಲಾಯಿತು ಎಂಬ ವಿವರಗಳನ್ನು ಬಹಿರಂಗಪಡಿಸಿಲ್ಲ. ಗಲ್ಫ್ ರಾಷ್ಟ್ರದಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ಪವಿತ್ರ ಸ್ಥಳಗಳ ಮೇಲೆ ದಾಳಿ ನಡೆಸುವುದನ್ನು ಉಗ್ರಗಾಮಿ ಕೃತ್ಯ ಎಂದೇ ಗುರುತಿಸಲಾಗಿದೆ.
1979ರಲ್ಲಿ ಮೆಕ್ಕಾದಲ್ಲಿನ ಪವಿತ್ರ ಮಸೀದಿಯನ್ನು ವಶಕ್ಕೆ ಪಡೆದುಕೊಂಡ ಕಾರಣಕ್ಕೆ 63 ಮಂದಿಗೆ ಗಲ್ಲು ಶಿಕ್ಷೆ ಘೋಷಿಸಿದ್ದು, ಅವರಿಗೆ 1980ರ ಜನವರಿಯಲ್ಲಿ ಸಾಮೂಹಿಕ ಮರಣದಂಡನೆಯನ್ನು ವಿಧಿಸಲಾಗಿತ್ತು.