ನವದೆಹಲಿ: ಕೊರೊನಾ ಸೋಂಕಿನಿಂದ ಬಳಲುತ್ತಿರುವ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆರೋಗ್ಯ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸತ್ಯೇಂದ್ರ ಜೈನ್‍ರ ಶ್ವಾಸಕೋಶಕ್ಕೆ ಕೊರೊನಾ ಸೋಂಕು ಹರಡಿದ್ದು, ಆರೋಗ್ಯ ಸ್ಥಿತಿ ತುಂಬಾ ಹದಗೆಡುತ್ತಿದೆ ಎನ್ನಲಾಗಿದೆ. ಹೀಗಾಗಿ ಕೊರೊನಾ ರೋಗಿಗಳಿಗೆ ನೀಡುವ ಪ್ಲಾಸ್ಮಾ ಚಿಕಿತ್ಸೆ ನೀಡಲು ವೈದ್ಯರು ಸಿದ್ಧತೆ ನಡೆಸಿದ್ದಾರೆ.
ಜೈನ್ ಅವರಿಗೆ ಮೊದಲ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ನಿನ್ನೆ ಮತ್ತೆ ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಸತ್ಯೇಂದ್ರ ಜೈನ್ ನಿಮೋನಿಯಾದಿಂದ ಬಳಲುತ್ತಿದ್ದು, ರಾಜೀವ್‍ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮ್ಯಾಕ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ದೇಹದಲ್ಲಿ ಆಮ್ಲಜನಕದ ಪ್ರಮಾಣ ಕುಸಿದ ಹಿನ್ನೆಲೆಯಲ್ಲಿ ಕೃತಕ ಆಮ್ಲಜನಕದ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜೈನ್‍ರಿಗೆ ಸಿಟಿ ಸ್ಕ್ಯಾನಿಂಗ್ ಮಾಡಿದಾಗ ಶ್ವಾಸಕೋಶದಲ್ಲಿ ನಿಮೋನಿಯಾ ದೊಡ್ಡ ಪ್ರಮಾಣದಲ್ಲಿ ಹರಡಿರುವುದು ಪತ್ತೆಯಾಗಿದೆ. ಹೀಗಾಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ ಎಂದು ದೆಹಲಿ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಬೆಳಿಗ್ಗೆಯಿಂದ ಸತ್ಯೇಂದ್ರ ಜೈನ್ ತುಂಬಾ ಸುಸ್ತಾಗಿದ್ದಾರೆ. ಹೀಗಾಗಿ ವೈದ್ಯರ ಜತೆ ನಿರಂತರ ಸಂಪರ್ಕದಲ್ಲಿದ್ದು, ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಸತ್ಯೇಂದ್ರ ಜೈನ್ ಶೀಘ್ರ ಗುಣಮುಖರಾಗಲಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹಾರೈಸಿದ್ದಾರೆ.