ಮೈಸೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಮತ್ತೊಮ್ಮೆ ಲಾಕ್ ಡೌನ್ ಮಾಡುವ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ಮತ್ತೆ ಲಾಕ್ ಡೌನ್ ಬೇಡ ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಮಾಡಿ ಎಷ್ಟು ದಿನ ಅಂತ ಜನರನ್ನು ಮನೆಯಲ್ಲಿ ಕೂರಿಸುತ್ತೀರಾ..? ಜೀವ ಉಳಿಸೋಕೆ ಹೋಗಿ ಜೀವನ ಹಾಳಾಗಬಾರದು. ಸದ್ಯ ಪರಿಸ್ಥಿತಿ ಸರ್ಕಾರದ ನಿಯಂತ್ರಣದಲ್ಲಿದೆ. ಸುಮ್ಮನೆ ಪ್ಯಾನಿಕ್ ಕ್ರಿಯೇಟ್ ಮಾಡುವ ಅಗತ್ಯವಿಲ್ಲ. ನನಗೆ ಅನ್ನಿಸುತ್ತದೆ ಮತ್ತೆ ಲಾಕ್‌ಡೌನ್ ಅವಶ್ಯಕತೆ ಇಲ್ಲ ಅಂತ. ಭಾರತದಲ್ಲಿ ಲಕ್ಷಗಟ್ಟಲೇ ಜನ ಸಾಯ್ತಾರೆ ಎಂದು ತಜ್ಞರು ಹೇಳಿದ್ದರು. ಹಾಗೇನಾದ್ರು ಆಯ್ತಾ? ಈಗಲೂ ಅಷ್ಟೆ, ಏನೂ ಆಗಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಪ್ರತಾಪ್ ಸಿಂಹ.
ಬೆಂಗಳೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಹೊರರಾಜ್ಯಗಳು, ಹೊರದೇಶಗಳಿಂದ ಬಂದವರದ್ದು. ಹಾಗಾಗಿ ಬೆಂಗಳೂರಿಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಇದರಿಂದಾಗಿ ಅಲ್ಲೂ ಕೂಡ ಲಾಕ್ ಡೌನ್ ಅಗತ್ಯವಿಲ್ಲ. ಜನತೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕೊರೊನಾ ನಿಯಂತ್ರಿಸಬಹುದಾಗಿದೆ. ಲಾಕ್ ಡೌನ್ ಮಾಡಿದರೆ ಜನರ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದರು.
ಮುಂದುವರಿದು ಮಾತನಾಡಿದ ಅವರು, ಕೆಲವು ತಜ್ಞರ ಮಾತು ಕೇಳಿಕೊಂಡು ಲಾಕ್ ಡೌನ್ ಮಾಡಬಾರದೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.