ಕೊರೊನಾ ಹೊಡೆತಕ್ಕೆ ಜನರ ಬದುಕು ತತ್ತರಿಸಿದೆ. ಮನೆಯಲ್ಲಿ ಉಳಿದ ಕೆಲ ಜನರಲ್ಲಿ ಮಾನಸಿಕ ಖಿನ್ನತೆ ಕಂಡು ಬರುತ್ತಿದೆ. ಮನೆಗಳನ್ನು ಹೊರತುಪಡಿಸಿ ಪಿಜಿ. ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಹೌಸ್ ಗಳಲ್ಲಿ ಉಳಿದವರಿಗೆ ಆಹಾರದ ಕೊರತೆ ಉಂಟಾಗಿದೆ. ಹಾಗಾಗಿ ಪಿಜಿ, ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಹೌಸ್ ನಲ್ಲಿ ಇರುವ ಜನರಿಗೆ ಆಹಾರದ ವ್ಯವಸ್ಥೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಕೊರೊನಾ ವೈರಸ್ ಹರಡುವಿಕೆ ಹೆಚ್ಚಾದ ಕಾರಣ ದೇಶವನ್ನು 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಲಾಕ್ ಡೌನ್ ವನವಾಸ ಮುಗಿಯಲು ಇನ್ನೂ 14 ದಿನಗಳು ಬಾಕಿ ಇವೆ. ರಾಜ್ಯ ಸರ್ಕಾರ ಬಂದ್ ಘೋಷಣೆ ಮಾಡಿ ಎರಡೇ ದಿನಕ್ಕೆ ಬೆಂಗಳೂರಿನಲ್ಲಿ ಸರಿಸುಮಾರು 5000 ಪಿಜಿಗಳು ಖಾಲಿಯಾಗಿದ್ದವು. ಇದಾದ ಬಳಿಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಠಿಣ ಕ್ರಮಗಳನ್ನು ತೆಗೆದುಕೊಂಡವು. ಸಾರಿಗೆ ಸಂಪರ್ಕ ಸಂಪೂರ್ಣ ಬಂದ್ ಮಾಡಲಾಯಿತು. ಅಲ್ಲದೆ ಯಾರು ಎಲ್ಲಿ ಇದ್ದಾರೋ ಅಲ್ಲೇ ಇರಬೇಕು ಎಂದು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಿಜಿ, ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಹೌಸ್ ಗಳಲ್ಲಿ ಉಳಿದವರು ತಮ್ಮ ಊರುಗಳಿಗೆ ತೆರಳಲು ಆಗಲಿಲ್ಲ. ಪಿಜಿ, ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಹೌಸ್ ಗಳಲ್ಲಿ ಇದ್ದವರನ್ನು ಖಾಲಿ ಮಾಡಿಸಲಾಗುತ್ತಿತ್ತು. ಇದಕ್ಕೆ ರಾಜ್ಯ ಸರ್ಕಾರ ತಡೆ ನೀಡಿ, ಯಾರನ್ನು ಸಹ ಹೊರಗೆ ಕಳಿಸುವಂತಿಲ್ಲ. ಒಂದು ವೇಳೆ ಮಾಲೀಕರು ಒತ್ತಾಯ ಮಾಡಿ ಪಿಜಿ, ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಗಳಿಂದ ಹೊರ ಕಳಿಸಿದರೇ, ಅವರ ಮೇಲೆ ಕ್ರಮ ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿತ್ತು. ಹಾಗಾಗಿ ಇನ್ನೂ ಎಷ್ಟೋ ಜನ ಪಿಜಿ, ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಹೌಸ್ ಗಳಲ್ಲಿ ಉಳಿದಿದ್ದಾರೆ. ಇವರು ಆಹಾರದ ಸಮಸ್ಯೆಗೆ ಸಿಲುಕಿದ್ದರು. ಇದು ಸರ್ಕಾರದ ಗಮನಕ್ಕೆ ಬಂದ ಮೇಲೆ ಅವರಿಗೆ ಆಹಾರ ಪೂರೈಸಲು ರಾಜ್ಯ ಸರ್ಕಾರ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ರಾಜ್ಯದಲ್ಲಿರುವ ಪಿಜಿ, ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಹೌಸ್ ಗಳಲ್ಲಿ ಇರುವವರಿಗೆ ಹೆಚ್ಚಿನ ಶುಚಿತ್ವದೊಂದಿಗೆ ಊಟವನ್ನು ನೀಡಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಜೊತೆಗೆ ಇದರ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಆದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಪಿಜಿ, ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಹೌಸ್ ಗಳಲ್ಲಿ ಇರುವವರಿಗೆ ಆಹಾರ ಪೂರೈಕೆ ಮಾಡುವ ಜವಬ್ದಾರಿ ಜಿಲ್ಲಾಡಳಿತಗಳು ನೋಡಿಕೊಳ್ಳುತ್ತವೆ. ಲಾಕ್ ಡೌನ್ ಮುಗಿಯುವವರೆಗೂ ಇದರ ಜವಬ್ದಾರಿಯನ್ನು ಜಿಲ್ಲಾಡಳಿತವೇ ನಿಭಾಯಿಸುತ್ತದೆ.








