ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಎಂಬ ಮಹಾಮಾರಿ ನಂತರ ತನ್ನ ಕೆನ್ನಾಲಗೆಯನ್ನು ಇಟಲಿಯತ್ತ ಚಾಚಿತು. ಕೊರೋನಾ ಹೊಡೆತಕ್ಕೆ ನುಚ್ಚುನೂರಾಗಿರುವ ಇಟಲಿ ಎಂಬ ಪುಟ್ಟ ರಾಷ್ಟ್ರ ದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 5 ಸಾವಿರದ ಸಮೀಪ ಬಂದಿದೆ. ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿರುವ ಇಟಲಿ, ಕೊರೊನಾ ವೈರಸ್‌ನಿಂದಾಗಿ ಭಾರೀ ನಷ್ಟಕ್ಕೊಳಗಾದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಇಟಲಿಯಂಥ ರಾಷ್ಟ್ರದಲ್ಲಿ ಈ ರೀತಿ ಸಾವು-ನೋವು ಸಂಭವಿಸಿದೆಯಲ್ಲ ಎಂದು ಎಲ್ಲರೂ ಅಚ್ಚರಿಪಡುತ್ತಿದ್ದರೆ, ಇದಕ್ಕೆಲ್ಲ ನಮ್ಮ ಅಸಡ್ಡೆಯೇ ಕಾರಣವಾಯಿತು ಎಂದು ಇಟಾಲಿಯನ್ನರು ಉತ್ತರಿಸುತ್ತಾರೆ.
ನಾವು ಆರಂಭದಲ್ಲಿ ಕೊರೊನಾ ಅಪಾಯವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರಿಂದಾಗಿ, ಇಂದು ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಅಂದು ನಾವು ಮಾಡಿದ ತಪ್ಪನ್ನೇ, ಈಗ ಅನೇಕ ದೇಶಗಳು ಮಾಡುತ್ತಿವೆ. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳ ಜನರು ಈ ವಿಷಯವನ್ನು ಹಗುರಾಗಿ ನೋಡುತ್ತಿದ್ದಾರೆ. ‘ ಎಂದಿದ್ದಾರೆ ಸಾಕ್ಷ್ಯ ಚಿತ್ರ ನಿರ್ದೇಶಕ ಓಲ್ಮೋ ಪೇರೆಂಟಿ.
ಇಟಾಲಿಯನ್ ಮಾಧ್ಯಮಗಳು ಕೊರೊನಾ ವೈರಸ್ ಬಗ್ಗೆ ವರದಿ ಮಾಡಲಾರಂಭಿಸಿದಾಗ, ಅನೇಕ ಇಟಾಲಿಯನ್ನರಂತೆ ಓಲ್ಮೋ ಪೇರೆಂಟಿ ಕೂಡ ಕೊರೊನಾ ವೈರಸ್ ನ ಅಪಾಯ ಗಂಭೀರವಾದದ್ದು ಎಂದು ಪರಿಗಣಿಸಲಿಲ್ಲವಂತೆ. ಕೆಲವೇ ದಿನಗಳ ನಂತರ ಬೆರಳೆಣಿಕೆಯಷ್ಟಿದ್ದ ಪ್ರಕರಣಗಳು ನೋಡ ನೋಡುತ್ತಿದ್ದಂತೆಯೇ ನೂರರ ಗಡಿ ದಾಟಲಾರಂಭಿಸಿಬಿಟ್ಟವು. ಈಗ ಕೊರೊನಾ ಸೋಂಕಿನಿಂದ ಮೃತರಾದವರು 5 ಸಾವಿರದ ಸಮೀಪಕ್ಕೆ ಬಂದಿದೆ. 24 ಗಂಟೆಗಳ ಅವಧಿಯಲ್ಲಿ 800 ಮಂದಿ ಸಾವಿಗೀಡಾಗಿದ್ದಾರೆ. ಇಡೀ ದೇಶವೇ ಲಾಕ್‌ಡೌನ್ ಆಗಿದೆ.
ಇಟಲಿಯ ಸಿನೆಮಾ ನಿರ್ದೇಶಕ ಇಟಾಲೋ ಸ್ಪಿನೆಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂಭಾಷಿಸಿದ್ದು, ‘ಆದಷ್ಟು ಒಳಗೇ ಇರಿ. ನೀವು ಇರುವುದು ದೇಶಕ್ಕಾಗಿ. ಪರಸ್ಪರ ನಮ್ಮೊಳಗೆ ಧೈರ್ಯವನ್ನು ತುಂಬಿಕೊಳ್ಳಲು ರಾಷ್ಟ್ರಗೀತೆಯನ್ನು ಹಾಡಿ, ಸಕಾರಾತ್ಮಕವಾಗಿ ಯೋಚಿಸಿ. ಸಕಾರಾತ್ಮಕವಾದುದನ್ನು ವೀಕ್ಷಿಸಿ. ನಾವೂ ಅದನ್ನೇ ನಿತ್ಯವೂ ಮಾಡುತ್ತಿದ್ದೇವೆ’ ಎಂದಿದ್ದಾರೆ.
ಕೊರೋನಾ ಭೀತಿಯ ಸಂದರ್ಭದಲ್ಲಿ ಭಾರತೀಯರಿಗೆ ಇಟಾಲೋ ಸ್ಪಿನೆಲಿ ಎರಡು ಸಲಹೆಗಳನ್ನು ನೀಡಿದ್ದಾರೆ
ಒಂದು-ಮನೆಯೊಳಗೇ ಆದಷ್ಟು ಇರಿ, ಕಷ್ಟವಾಗುತ್ತದೆ ನಿಜ. ಆದರೂ ಹೊರಗೆ ಬರಬೇಡಿ.
ಎರಡು – ಸಕಾರಾತ್ಮಕವಾಗಿ ಯೋಚಿಸಿ, ಒಳ್ಳೆಯ ದಿನ ಬರುತ್ತದೆ. ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಡಿ, ಕತ್ತಲು ಕಳೆದು ಬೆಳಕು ಬರಲೇಬೇಕು, ಬಂದೇ ಬರುತ್ತದೆ.

ಇಂದು ಇಟಲಿಯಂಥ ಪುಟ್ಟ ರಾಷ್ಟ್ರ ದಲ್ಲೇ ಆಸ್ಪತ್ರೆಗಳು ತುಂಬಿ ಹೋಗಿವೆ. ಯಾವ ಆಸ್ಪತ್ರೆಗಳಲ್ಲೂ ರೋಗಿಗಳಿಗೆ ಹಾಸಿಗೆಗಳಿಲ್ಲ. ಕೊರೋನಾ ಪೀಡಿತರಿಗೆ ಚಿಕಿತ್ಸೆ ಕೊಟ್ಟ ವೈದ್ಯರುಗಳೇ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.ಇಂಥ ಆತಂಕದ ಸ್ಥಿತಿಯಲ್ಲಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮಾತ್ರ ಬದುಕುಳಿಯಬಲ್ಲವು. ಯಾರೂ ಹೊರಗೆ ಬರಬೇಡಿ, ಇದು ಯುದ್ಧ ಎಂದು ಹೇಳುವ ಇಟಾಲೋ, ಇಟಲಿ ಮಲಗಿ ಬಹು ದಿನಗಳಾಗಿವೆ. ಯುರೋಪಿನ ದೊಡ್ಡ ರೈಲು ನಿಲ್ದಾಣ ಮಿಲಾನೊ ದಲ್ಲಿ ಜನರೇ ಇಲ್ಲ. ಸಂಪೂರ್ಣ ಖಾಲಿ ಖಾಲಿ, ರೈಲುಗಳಿದ್ದರೂ ಪ್ರಯೋಜನವಿಲ್ಲ. ತುರ್ತು ಸ್ಥಿತಿ ಇದ್ದಲ್ಲಿ ಜನರುಅನುಮತಿ ಪಡೆದು ಬರಬೇಕು. ಇಲ್ಲವಾದರೆ ಪೊಲೀಸರು ಬಂಧಿಸುತ್ತಾರೆ ಎಂದು ಅಲ್ಲಿನ ಪರಿಸ್ಥಿತಿ ವಿವರಿಸುತ್ತಾರೆ.
ತಮ್ಮಿಂದ ಎರಡು ರೀತಿ ಯಲ್ಲಿ ತಪ್ಪುಗಳಾಗಿವೆ.
ಮೊದಲನೆಯದು – ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಾಗ ಸ್ವಲ್ಪ ಎಡವಿದೆವು. ಎರಡನೆಯದು- ಹಲವು ಸಲಹೆಗಳನ್ನು ಲಘುವಾಗಿ ತೆಗೆದುಕೊಂಡೆವು. ಹಾಗಾಗಿ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಂಕ್ರಾಮಿಕ ವೈರಾಣುಗಳ ಹರಡುವಿಕೆಗೆ ನಾವೂ ಸಹ ಕಾರಣರಾಗಬಾರದೆಂದರೆ ಮನೆಯೊಳಗೆ ಇರುವುದೇ ಕ್ಷೇಮ. ಆ ಮೂಲಕವೇ ನಾವು ವೈರಾಣುವನ್ನು ಸೋಲಿಸಿ ಈ ಯುದ್ಧದಲ್ಲಿ ಗೆಲ್ಲಬಹುದು ಎಂದು ಅವರು ಹೇಳಿದ್ದಾರೆ.
ನಾವೂ ನಮ್ಮ ನಮ್ಮ ವಸತಿ ಸಮುಚ್ಚಯಗಳಲ್ಲಿ ಏಕಾಂತದಲ್ಲಿದ್ದೇವೆ. ಮನೆಯಿಂದ ಹೊರಗೆ ಬಾರದೇ ಹಲವು ದಿನಗಳು ಆಗಿವೆ. ಆದರೂ ಹತಾಶರಾಗಿಲ್ಲ. ಒಂದಿಷ್ಟು ಓದು, ಬರಹ ಹೀಗೆ ಕಾಲ ಕಳೆಯುತ್ತಿದ್ದೇವೆ. ಜೀವನ ಪ್ರೀತಿ ಉಳಿಸಿಕೊಳ್ಳಲು ಸ್ಪೀಕರ್‌ಗಳಲ್ಲಿ ದೊಡ್ಡದಾಗಿ ರಾಷ್ಟ್ರಗೀತೆಯನ್ನು ಕೇಳುತ್ತೇವೆ. ಅದು ನಮ್ಮೊಳಗೆ ಸ್ಫೂರ್ತಿ ತುಂಬುತ್ತದೆ. ಇನ್ನೂ ಬದುಕಬೇಕೆಂಬ ಪ್ರೀತಿಯನ್ನು ಉಕ್ಕಿಸುತ್ತದೆ. ನೀವೂ ಹಾಗೆಯೇ ಮಾಡಿ ಎಂದು ಭಾರತೀಯರಿಗೆ ಇಟಾಲೋ ಸ್ಪಿನೆಲಿ ಸಲಹೆ ನೀಡಿದ್ದಾರೆ.








