ಬೆಂಗಳೂರು: ಮುಡಾ ಹಗರಣದ (MUDA Scam) ಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಚಾಲನೆ ಸಿಕ್ಕಿತು.
ನಗರದ ಕೆಂಗೇರಿ ಬಳಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ (Siddaramaiah) ಅವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರವನ್ನೇ ಕೆಲಸ ಮಾಡಿಕೊಂಡಿದೆ. ಹೀಗಾಗಿ ಈ ಸರ್ಕಾರದ ವಿರುದ್ಧ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸುತ್ತೇವೆ. ಪ್ರತಿಯೊಂದು ಕಡೆ 8 ರಿಂದ 10 ಸಾವಿರ ಜನ ಸೇರಲಿದ್ದಾರೆ. ಇದು ಸಿಎಂಗೆ ಕೊನೆಯ ಅವಕಾಶ. ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜೀನಾಮೆ ಅವರಾಗಿಯೇ ಕೊಟ್ಟರೆ ಅವರಿಗೆ ಅದು ಶೋಭೆ ತರುತ್ತದೆ, ಪಕ್ಷಕ್ಕೆ ಗೌರವ ಸಿಗುತ್ತದೆ. ಇಲ್ಲದಿದ್ದರೆ ಅನಿವಾರ್ಯವಾಗಿ ರಾಜ್ಯಪಾಲರೇ ಕ್ರಮ ತೆಗೆದುಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಭ್ರಷ್ಟಾಚಾರದ ಕುರಿತು ಜಗತ್ತಿಗೆ ವಾಸ್ತವ ಸ್ಥಿತಿ ತಿಳಿದಿದೆ. ಅವರು ಯಾವುದೇ ಆರೋಪಗಳಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ರಾಜ್ಯಪಾಲ ಕಚೇರಿ ದುರ್ಬಳಕೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ವಾಸ್ತವಿಕ ಸತ್ಯ ಸಂಗತಿ ದೇಶದ ಜನರಿಗೆ ಗೊತ್ತಿದೆ. ಈ ರೀತಿಯ ಆರೋಪ ಮಾಡುವುದರಿಂದ ಅವರು ಆರೋಪದಿಂದ ಮುಕ್ತ ಆಗಲು ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಯಾವುದೇ ರೀತಿಯಿಂದಲೂ ಬಚಾವ್ ಆಗಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಹಾಗೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.








