ಗಡಿಜಿಲ್ಲೆ ಚಾಮರಾಜನಗರದ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಇನ್ನು ಮುಂದೆ ಡ್ರೋನ್ ಕ್ಯಾಮರಾ ಕಣ್ಗಾವಲಿರುವುದಾಗಿ ರಾಜ್ಯ ಅರಣ್ಯ ಇಲಾಖೆ ನಿರ್ಧರಿಸಿದೆ. ಬಂಡೀಪುರದಲ್ಲಿ ಕಳೆದ ವರ್ಷ ಸಂಭವಿಸಿದ ಕಾಡ್ಗಿಚ್ಚಿನಿಂದ ಸುಮಾರು ಹದಿನೈದು ಸಾವಿರ ಎಕರೆ ಅರಣ್ಯ ಪ್ರದೇಶ ಭಸ್ಮವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಡ್ರೋಣ್ ಕ್ಯಾಮರಾ ಕಣ್ಗಾವಲಿರಿಸಲು ಸಜ್ಜುಗೊಂಡಿದೆ.
ಕಾಡ್ಗಿಚ್ಚಿನಂತ ಭೀಕರ ಅಗ್ನಿದುರಂತವನ್ನು ತಡೆಗಟ್ಟಲು ಹಾಗೂ ಕಾಡ್ಗಿಚ್ಚಿಗೆ ಕಾರಣರಾದವರನ್ನು ಪತ್ತೆ ಹಚ್ಚಲು ಡ್ರೋನ್‍ಗಳು ತುಂಬಾ ಸಹಾಯಕಾರಿಯಾಗಲಿವೆ. ಹೀಗಾಗಿ ಬಂಡೀಪುರ ಮತ್ತು ನಾಗರಹೊಳೆ ಉದ್ಯಾನವನಗಳಲ್ಲಿ ಡ್ರೋನ್ ಗಳ ಕಣ್ಗಾವಲಿರಿಸಲು ನಿರ್ಧರಿಸಲಾಗಿದೆ. ಹಾಗೇ ಮೈಸೂರು ಅಥವಾ ಚಾಮರಾಜನಗರದಲ್ಲಿ ಡ್ರೋಣ್‍ಗಳಲ್ಲಿ ಸೆರೆಯಾದ ದೃಶ್ಯಗಳ ಪರಿಶೀಲನಾ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆ ಅರಣ್ಯ ಪ್ರದೇಶದಲ್ಲಿ ಯಾವುದೇ ಮೋಜು ಮಸ್ತಿಗೆ ಅವಕಾಶ ನೀಡದಂತೆ ಕಟ್ಟಾಜ್ಞೆ ಮಾಡಲಾಗಿದೆ ಎನ್ನಲಾಗಿದೆ.
ಬಂಡೀಪುರ ಹಾಗೂ ನಾಗರ ಹೊಳೆ ಅರಣ್ಯ ಪ್ರದೇಶಗಳಲ್ಲಿ ಒಟ್ಟು 13 ವಲಯಗಳಿವೆ. ಈ ವಲಯಗಳಲ್ಲಿ 40 ರಿಂದ 50 ಸಿಬ್ಬಂದಿ ನೇಮಕ ಮಾಡಿ, ದಿನದ 24 ಕಾಲ ಕಾಡ್ಗಿಚ್ಚಿನ ಬಗೆಗೆ ನಿಗಾ ಇಡಲು ಸೂಚನೆ ನೀಡಲಾಗುವುದು ಎಂದು ಹೇಳಲಾಗಿದೆ. ಫೈರ್ ವಾಚರ್ ಗಳಿಗೆ ಅರಣ್ಯ ಇಲಾಖೆ ವತಿಯಿಂದಲೇ ಜೀವವಿಮಾ ಸೌಲಭ್ಯ ಸಹ ನೀಡಲಿದೆ ಎಂದು ಹೇಳಲಾಗಿದೆ.








