ಬೆಂಗಳೂರು : ರಾಜ್ಯದಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ಬಿಸಿಬಿಸಿ ಚರ್ಚೆ ಆಗುತ್ತಿದ್ದು ಈ ವಿಚಾರವಾಗಿ ಕಂದಾಯ ಸಚಿವ ಆರ್ ಅಶೋಕ್, “ಎಣ್ಣೆ ಸಹವಾಸ ಹೆಂಡತಿ, ಮಕ್ಕಳ ಉಪವಾಸ. ಹೀಗಾಗಿ ಸದ್ಯಕ್ಕೆ ರಾಜ್ಯದಲ್ಲಿ ಎಣ್ಣೆ ಸಹವಾಸ ಬೇಡವೇ ಬೇಡ” ಎಂದು ಹಾಸ್ಯಮಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮುಂದುವರೆದಿದೆ. ಈ ಹಂತದಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ, ಬಡವರಿಗೆ, ಕಾರ್ಮಿಕರಿಗೆ ನೀಡುವ ಉಚಿತ ಆಹಾರ ಸಾಮಗ್ರಿಗಳು ಪೋಲಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದಲ್ಲಿ ಸದ್ಯಕ್ಕೆ ಮದ್ಯ ಮಾರಾಟ ಬೇಡವೇ ಬೇಡ ಎಂದು ಅಶೋಕ್ ತಿಳಿಸಿದರು.
ಸದ್ಯ ದೇಶಾದ್ಯಂತ ಮದ್ಯ ಮಾರಾಟಕ್ಕೆ ಬ್ರೇಕ್ ನೀಡಿದ್ದು, ಕೇಂದ್ರ ಸರ್ಕಾರ ಕೂಡ ಸದ್ಯಕ್ಕೆ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿಲ್ಲ. ಮದ್ಯ ಸೇವಿಸುವುದರಿಂದ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಲಿದೆ. ಹೀಗಾಗಿ ಮದ್ಯ ಮಾರಾಟಕ್ಕೆ ಅವಕಾಶ ಕೊಡದೇ ಇರುವುದೇ ಒಳಿತು ಎಂದು ಪ್ರಧಾನಿ ಮೋದಿಗೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.