ಕೋಟಿಗೊಬ್ಬ 2,3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಕಾರು ಅಪಘಾತ…
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪೃಥ್ವಿ, ಹಾಗೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2, ಕೋಟಿಗೊಬ್ಬ-3 ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.
ಬೆಂಗಳೂರಿನಿಂದ ಬೆಳಗಿನ ಜಾವ ಕುಟುಂಬಸ್ಥರೊಂದಿಗೆ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ ವೇಳೆ ಸೂರಪ್ಪ ಬಾಬು ಆವರ ಕಾರು ಹೊಸೂರಿನ ಸಮೀಪ ಅಫಘಾತಕ್ಕೀಡಾಗಿದೆ. ಈ ಅವಘಡ ಯಾರಿಗೂ ಹೆಚ್ಚಿನ ತೊಂದರೆಯಾಗಿಲ್ಲ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದರೂ, ಯಾರಿಗೂ ತೀವ್ರ ಗಾಯವಾಗಿಲ್ಲ ಎಂದು ಸೂರಪ್ಪ ಬಾಬು ಅವರೇ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ ಸೂರಪ್ಪ ಬಾಬು ಕುಟುಂಬಸ್ಥರು ತಮಿಳುನಾಡಿನಲ್ಲಿರುವ ಬ್ರಹ್ಮ ದೇವಸ್ಥಾನಕ್ಕೆ ಹೊರಟಿದ್ದರು. ಈ ವೇಳೆ ಹೊಸೂರು ಕ್ರಾಸ್ ಬಳಿ ಕಾರು ಆಕ್ಸಿಡೆಂಟ್ ಆಗಿದೆ. ಈ ವೇಳೆ ಮುಂಭಾಗದಲ್ಲಿ ಕೂತಿದ್ದ ಸೂರಪ್ಪ ಬಾಬು ಅವರ ಕಾಲಿಗೆ ಪೆಟ್ಟಾಗಿದ್ದು, ಇತರರಿಗೆ ಯಾವುದೇ ತೊಂದರೆಯಾಗಿಲ್ಲ. ಕಾಲಿಗೆ ಕೊಂಚ ಪೆಟ್ಟು ಬಿದ್ದ ಕಾರಣ ವೈದ್ಯರಿಗೆ ತೋರಿಸಲು ಸೂರಪ್ಪ ಬಾಬು ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಿದ್ದಾರೆ.
“ನಾನು ಮುಂದಿನ ಸೀಟಿನಲ್ಲಿ ಕುಳಿತಿದ್ದೆ. ಅದಕ್ಕೆ ನನಗೆ ತೀವ್ರ ಕಾಲು ನೋವು ಕಾಣಿಸಿಕೊಂಡಿತು. ಹೀಗಾಗಿ ವೈದ್ಯರು ಚಿಕಿತ್ಸೆ ಕೊಟ್ಟಿದ್ದಾರೆ. ಪ್ರಸ್ತುತ ನನ್ನ ಕಾಲಿಗೆ ಬ್ಯಾಂಡೇಜ್ ಹಾಕಲಾಗಿದ್ದು, ಈಗ ಆರಾಮಾಗಿದ್ದೇನೆ. ಸ್ವಲ್ಪ ದಿನ ರೆಸ್ಟ್ ಮಾಡಿ ಎಂದು ವೈದ್ಯರು ಸೂಚಿಸಿದ್ದಾರೆ” ಎಂದು ಸೂರಪ್ಪ ಬಾಬು ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ವಿತರಕರಾಗಿ ಹಾಗೂ ನಿರ್ಮಾಪಕರಾಗಿ ತೊಡಗಿಸಿಕೊಂಡಿರುವ ಸೂರಪ್ಪ ಬಾಬು ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.








