ಕೋವಿಡ್ ನಿಯಮ ಉಲ್ಲಂಘಿಸಿ ದೇಗುಲಕ್ಕೆ ಭೇಟಿ : ವಿಜಯೇಂದ್ರ ವಿರುದ್ಧ ಎಫ್ ಐಆರ್..?
ಮೈಸೂರು : ರಾಜ್ಯದಾದ್ಯಂತ ಲಾಕ್ ಡೌನ್ ಇದ್ದರೂ, ಕೊರೊನಾ ನಿಯಮ ಉಲ್ಲಂಘಿಸಿ ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ವಿರುದ್ಧ ಎಫ್‍ಐಆರ್ ದಾಖಲು ಮಾಡಬೇಕು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.
ಈ ಕುರಿತು ಮೈಸೂರು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮನವಿ ಸಲ್ಲಿಸಿದೆ.
ವಿಜಯೇಂದ್ರ ವಿರುದ್ಧ ಎಫ್ ಆರ್ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು ಎಂದು ಕಾಂಗ್ರೆಸ್ ತನ್ನ ಮನವಿಯಲ್ಲಿ ಒತ್ತಾಯಿಸಿದೆ.
ಮೇ 18ರಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಕುಟುಂಬ ಸಮೇತರಾಗಿ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು.
ವಿಶೇಷ ಪೂಜೆ ಹಾಗೂ ಹೋಮ ನಡೆಸಿದ್ದರು. ಇದು ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ 2005, ಸೆಕ್ಷನ್ 51 ಸ್ಪಷ್ಟ ಉಲ್ಲಂಘನೆಯಾಗಿದೆ.
ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 2020ರ ಉಲ್ಲಂಘನೆ ಹಾಗೂ ಸರ್ಕಾರದ ಅಧಿಕಾರಿಗಳು ಹೊರಡಿಸುವ ಆದೇಶಕ್ಕೆ ವಿರುದ್ಧವಾದ ನಡವಳಿಕೆಯಾಗಿದೆ.
ಆದ್ದರಿಂದ ವಿಜಯೇಂದ್ರ ವಿರುದ್ಧ ಎಫ್‍ಐಆರ್ ದಾಖಲು ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.