ನವದೆಹಲಿ: ಇಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರು 60 ನೇ ಪುಣ್ಯ ಸ್ಮರಣೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಪುಷ್ಪ ನಮನ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಎಕ್ಸ್ ಖಾತೆಯಲ್ಲಿ, ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಕಾಂಗ್ರೆಸ್ ನಾಯಕರು ನೆಹರು ಅವರಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಸೇರಿದಂತೆ ಹಲವು ಗಣ್ಯರು ರಾಷ್ಟ್ರ ರಾಜಧಾನಿಯಲ್ಲಿನ ಅವರ ಸ್ಮಾರಕ ಶಾಂತಿವನಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದ್ದಾರೆ.
ವೈಜ್ಞಾನಿಕ, ಆರ್ಥಿಕ, ಕೈಗಾರಿಕಾ ಮತ್ತು ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು ಮುಂದಕ್ಕೆ ಕೊಂಡೊಯ್ದ ಆಧುನಿಕ ಭಾರತದ ವಾಸ್ತುಶಿಲ್ಪಿ ಪಂಡಿತ್ ಜವಾಹರಲಾಲ್ ನೆಹರು ಅವರ ಅತ್ಯುತ್ತಮ ಕೊಡುಗೆಯಿಲ್ಲದೆ ಭಾರತದ ಇತಿಹಾಸವು ಅಪೂರ್ಣವಾಗಿದೆ. ಅವರ ಪುಣ್ಯತಿಥಿಯಂದು “ಹಿಂದ್ ಕೆ ಜವಾಹರ್” ಅವರಿಗೆ ನಮ್ಮ ನಮನಗಳು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರೆದುಕೊಂಡಿದ್ದಾರೆ.
ಜವಾಹರಲಾಲ್ ನೆಹರು ಅವರು 1889ರ ನವೆಂಬರ್ 14 ರಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಜನಿಸಿದ್ದರು. 1964 ರ ಮೇ 27 ರಂದು ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು. 1947 ರ ಆಗಸ್ಟ್ 15 ರಂದು ಭಾರತದ ಮೊದಲ ಪ್ರಧಾನಿಯಾದರು.