ಚಂಡೀಗಢ: ಹುಟ್ಟುಹಬ್ಬ ಆಚರಣೆಗಾಗಿ ಆನ್ ಲೈನ್ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಪಂಜಾಬ್ನ ಪಟಿಯಾಲದಲ್ಲಿ ನಡೆದಿದೆ.
ಮಾನ್ವಿ(10) ಸಾವನ್ನಪ್ಪಿದ ದುರ್ದೈವಿ. ಮಾನ್ವಿ ಹುಟ್ಟು ಹಬ್ಬದಂದು ಆನ್ ಲೈನ್ ನಲ್ಲಿ ಕೇಕ್ ತರಿಸಿದ್ದಾರೆ. ಅದನ್ನು ತಿನ್ನುತ್ತಿದ್ದಂತೆ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ. ಹೀಗಾಗಿ ಕೇಕ್ ತಯಾರಿಸಿದ ಬೇಕರಿ ಮಾಲೀಕನ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಚಾಕಲೇಟ್ ಕೇಕ್ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಮಾನ್ವಿ ಅವರ ಕೇಕ್ ಕತ್ತರಿಸುವ ಮತ್ತು ಆಕೆ ಕುಟುಂಬದೊಂದಿಗೆ ಹುಟ್ಟುಹಬ್ಬದ ಆಚರಣೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕೇಕ್ ತಿಂದ ನಂತರ ಇಬ್ಬರು ಸಹೋದರಿಯರು ಸ್ವಲ್ಪ ಸಮಯದ ನಂತರ ವಾಂತಿ ಮಾಡಲು ಆರಂಭಿಸಿದ್ದಾರೆ. ಮಾನ್ವಿ ನನಗೆ ಬಹಳ ಬಾಯಾರಿಕೆ ಆಗುತ್ತಿದೆ. ಬಾಯಿ ಒಣಗುತ್ತಿದೆ ಎಂದು ಹೇಳಿ ಅನೇಕ ಬಾರಿ ನೀರು ಕೇಳಿ ಕುಡಿದು ಮಲಗಿದ್ದಾರೆ. ಅಸ್ವಸ್ಥಗೊಂಡ ಮಾನ್ವಿಯ ಆರೋಗ್ಯ ಮರುದಿನ ಬೆಳಗ್ಗೆ ಏರುಪೇರಾಗಿದೆ. ಗಾಬರಿಗೊಂಡ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೂಡಲೇ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾನ್ವಿ ಸಾವನ್ನಪ್ಪಿದ್ದಾರೆ.