ಉಪ್ಪಿನ ಕಾರ್ಖಾನೆಯ ಗೊಡೆ ಕುಸಿದು 12 ಮಂದಿ ಬಲಿ….
ಗುಜರಾತ್ ರಾಜ್ಯದ ಮೊರ್ಬಿಯ ಜಿಲ್ಲೆಯ ಹಲ್ವಾಡ್ ಜಿಐಡಿಸಿಯಲ್ಲಿ ಉಪ್ಪು ಕಾರ್ಖಾನೆಯ ಗೋಡೆ ಕುಸಿದು ಕನಿಷ್ಠ 12 ಕಾರ್ಮಿಕರು ಮೃತಪಟ್ಟು, ಹಲವರು ಗಾಯಗೊಂಡಿರುವ ದಾರುಣ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಹಲ್ವಾಡ್ ಜಿಐಡಿಸಿಯಲ್ಲಿರುವ ಸಾಗರ್ ಸಾಲ್ಟ್ ಎಂಬ ಕಾರ್ಖಾನೆಯಲ್ಲಿ ಹತ್ತಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಗೋಡೆ ಕುಸಿದು ಬಿದ್ದ ಪರಿಣಾಮ ಹಲವು ಕಾರ್ಮಿಕರು ಸಮಾಧಿಯಾಗಿದ್ದಾರೆ.
https://twitter.com/ANI/status/1526845950693896192
ಜೆಸಿಬಿ ಸಹಾಯದಿಂದ 12 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕೆಲ ಗಾಯಾಳುಗಳನ್ನು ರಕ್ಷಿಸಲಾಗಿದೆ. ಘಟನೆಯ ನಂತರ ಸ್ಥಳೀಯ ಶಾಸಕ ಪರಶೋತ್ತಮ್ ಸಬರಿಯಾ, ಜಿಲ್ಲಾಧಿಕಾರಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಮೋರ್ಬಿಯಲ್ಲಿ ಸಂಭವಿಸಿದ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ PMNRF ನಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50,000 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಪ್ರಧಾನ ಮಂತ್ರಿ ಸಚಿವಾಲಯ ತಿಳಿಸಿದೆ.
ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮೂಲಕ ಸಂತಾಪ ವ್ಯಕ್ತ ಪಡಿಸಿದ್ದಾರೆ. “ಗೋಡೆ ಕುಸಿತದಿಂದ ಮೋರ್ಬಿಯಲ್ಲಿ ಸಂಭವಿಸಿದ ದುರಂತವು ಹೃದಯ ವಿದ್ರಾವಕವಾಗಿದೆ. ಈ ದುಃಖದ ಸಮಯದಲ್ಲಿ, ದುಃಖತಪ್ತ ಕುಟುಂಬಗಳಿಗೆ ನೈತಿಕ ಬೆಂಬಲವಾಗಿ ಇರುತ್ತೇವೆ. ಗಾಯಾಳುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ. ಸ್ಥಳೀಯ ಅಧಿಕಾರಿಗಳು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ
ಮೃತರ ಕುಟುಂಬಕ್ಕೆ ಗುಜರಾತ್ ಸರ್ಕಾರದಿಂದ ತಲಾ 4 ಲಕ್ಷ ರೂ
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಅಪಘಾತದಿಂದ ತೀವ್ರ ದುಃಖಿತರಾಗಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಂತ್ರಸ್ತ ಕುಟುಂಬಕ್ಕೆ ತಲಾ ರೂ.4 ಲಕ್ಷ ನೆರವು ನೀಡಲಾಗುವುದು ಎಂದು ಸಿಎಂ ತಿಳಿಸಿದರು. ಇದೇ ವೇಳೆ ಈ ಅಪಘಾತದಲ್ಲಿ ಗಾಯಗೊಂಡವರಿಗೆ 50-50 ಸಾವಿರ ರೂಪಾಯಿಗಳ ನೆರವಿನೊಂದಿಗೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದಿದ್ದಾರೆ.