ರಾಜ್ಯದ ವಾಣಿಜ್ಯನಗರಿಯ ಶಾಲಾ-ಕಾಲೇಜುಗಳ ಮುಂದೆ ಹೈ ಅಲರ್ಟ್ – Saaksha Tv
ಧಾರವಾಡ: ಹಿಜಾಬ್ ತೀರ್ಪು ಬಂದ ಬೆನ್ನಲ್ಲೆ, ಹುಬ್ಬಳ್ಳಿಯ ಹುಬ್ಬಳ್ಳಿಯ ವಿವಿಧೆಡೆ ಶಾಲಾ ಕಾಲೇಜುಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ನಗರದಲ್ಲಿ ಹಿಜಾಬ್ ವಿವಾದ ತೀವ್ರಗೊಂಡಿದ್ದ ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಮಹಿಳಾ ಪದವಿ ಕಾಲೇಜು ಬಳಿ ಪೊಲೀಸ್ ಹೈ ಅಲರ್ಟ್ ಇದ್ದು, ಕಾಲೇಜು ಬಳಿ ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಲಾಗಿದೆ. ಈಗಾಗಲೇ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಶಾಲಾ ಕಾಲೇಜುಗಳಲ್ಲಿ ಚಟುವಟಿಕೆಗಳು ಎಂದಿನಂತೆ ಆರಂಭಗೊಂಡಿವೆ.
ಹುಬ್ಬಳ್ಳಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿರುವ ಬೆನ್ನಲ್ಲೇ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಚನ್ನಮ್ಮ ವೃತ್ತದಲ್ಲಿ ಕೆಎಸ್ಆರ್ಪಿ ತುಕಡಿ ಸೇರಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದ ವಿವಿಧೆಡೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಧಾರವಾಡ ಜಿಲ್ಲಾಡಳಿತ ಜರುಗಿಸಿದ್ದು, ಗುಂಪು ಸೇರದಂತೆ, ಮಾರಕಾಸ್ತ್ರ ಒಯ್ಯದಂತೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ವಿಜಯೋತ್ಸವ, ಮೆರವಣಿಗೆ ಇತ್ಯಾದಿಗಳ ಮೇಲೆಯೂ ನಿರ್ಬಂಧ ಹಾಕಲಾಗಿದೆ.