ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಚಿಕಿತ್ಸೆ ಸಿಗದೆ ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡಿಕೊಳ್ಳದ ಕಾರಣ ಒಂದು ತಿಂಗಳ ಹಸುಗೂಸು, ಪೌರಕಾರ್ಮಿಕ ಮಹಿಳೆ ಹಾಗೂ ವ್ಯಕ್ತಿ ಮೃತಟ್ಟಿರುವ ಘಟನೆ ನಡೆದಿದೆ.
ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರ ವರ್ತನೆ ನಗರದಲ್ಲಿ ಮಾನವೀಯತೆ ಸತ್ತು ಹೋಗಿದೆಯೇ ಎಂಬ ಪ್ರಶ್ನೆ ಕಾಡಲು ಶುರುವಾಗಿದೆ.
ರಾಜಾಜಿನಗರ ವ್ಯಾಪ್ತಿಯ ಮಂಜುನಾಥ ನಗರದ ವೆಂಕಟೇಶ್ ಎಂಬುವರ ಒಂದು ತಿಂಗಳ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ವೆಂಕಟೇಶ್ ಹಾಗೂ ಪತ್ನಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಎಂದರೆ, ಮತ್ತೆ ಕೆಲವು ಆಸ್ಪತ್ರೆಗಳಲ್ಲಿ ಕೊರೊನಾಗೆ ಚಿಕಿತ್ಸೆ ಕೊಡಲ್ಲ, ಬೇರೆ ಆಸ್ಪತ್ರೆಗಳಿಗೆ ಹೋಗಿ ಎಂದು ವಾಪಸ್ ಕಳಿಸಿದ್ದಾರೆ.
ಎಂ.ಎಸ್ ರಾಮಯ್ಯ, ಸ್ಪರ್ಶ, ಪೀಪಲ್ಸ್ ಟ್ರೀ ಸೇರಿದಂತೆ 10ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ದಂಪತಿ 38 ಗಂಟೆಗಳ ಕಾಲ 200 ಕಿ.ಮೀ ದೂರ ಮಗುವನ್ನು ಬೈಕ್‍ನಲ್ಲೇ ಕೂರಿಸಿಕೊಂಡು ಸುತ್ತಾಡಿದ್ದಾರೆ. ಆದರೂ ಯಾವುದೇ ಆಸ್ಪತ್ರೆಗಳೂ ಚಿಕಿತ್ಸೆ ನೀಡದ ಕಾರಣ ಉಸಿರಾಟ ತೊಂದರೆ ಹೆಚ್ಚಾಗಿ ಮಗು ಸಾವನ್ನಪ್ಪಿದೆ.
ಕೆಲ ಆಸ್ಪತ್ರೆಗಳು ಹೃದಯ ಸಮಸ್ಯೆ ಇದೆ, ಕಿಡ್ನಿ ಸಮಸ್ಯೆ ಇದೆ, ಬ್ರೈನ್ ತೊಂದರೆ ಎಂದು ಆಸ್ಪತ್ರೆಗಳಿಗೆ ಸುತ್ತಾಡಿಸಿದ್ದಾರೆ. ಜಯದೇವ ಆಸ್ಪತ್ರೆಗೆ ಕರೆದೊಯ್ದು ಪರಿಶೀಲನೆ ನಡೆಸಿದಾಗ ಹೃದಯ ತೊಂದರೆ ಇಲ್ಲ ಎಂದಿದ್ದಾರೆ. ಕೊನೆಗೆ ರೈನ್ ಬೋ ಆಸ್ಪತ್ರೆಗೆ ಕರೆದುಕೊಂಡು ಬರುವ ಹೊತ್ತಿಗೆ ಹಸುಗೂಸಿನ ಉಸಿರೇ ನಿಂತು ಹೋಗಿತ್ತು.
ಬೆಂಗಳೂರು ನಗರದ ವೈದ್ಯಕೀಯ ಸೇವೆ ಹಾಗೂ ವೈದ್ಯರ ವಿರುದ್ಧ ಮಗುವಿನ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರು ಮಾನವೀಯತೆ ಕಳೆದುಕೊಂಡಿದ್ದಾರೆ. ಒಂದು ತಿಂಗಳ ಪುಟ್ಟ ಮಗುವೆಂದು ಕನಿಷ್ಠ ಚಿಕಿತ್ಸೆಯನ್ನೂ ನೀಡದ ವೈದ್ಯರಿಗೆ ದಿಕ್ಕಾರವಿರಲಿ ಎಂದು ಕಣ್ಣೀರು ಹಾಕಿದ್ದಾರೆ.
ಆಸ್ಪತ್ರೆಗೆ ಅಲೆದು ಅಲೆದು ಸತ್ತ ವ್ಯಕ್ತಿ..!
ರಾಜಾಜಿನಗರದ ವ್ಯಕ್ತಿಯೊಬ್ಬರು ನಿನ್ನೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇಎಸ್‍ಐ ಆಸ್ಪತ್ರೆ ಸೇರಿದಂತೆ ನಗರದ ಹಲವು ಆಸ್ಪತ್ರೆಗಳಿಗೆ ರಾತ್ರಿ ಇಡಿ ಸುತ್ತಿದ್ದಾರೆ. ಕಾರ್ಪೋರೇಟರ್ ಫೋನ್ ಮಾಡಿ ಮನವಿ ಮಾಡಿದರೂ ಯಾವ ಆಸ್ಪತ್ರೆಗಳಲ್ಲೂ ಬೆಡ್ ಸಿಗದ ಕಾರಣ ಮನೆಗೆ ವಾಪಸ್ ಬಂದಿದ್ದಾರೆ. ಉಸಿರಾಟದ ಸಮಸ್ಯೆ ಹೆಚ್ಚಾಗಿ ಇಂದು(ಗುರುವಾರ) ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಆಸ್ಪತ್ರೆಗಳಲ್ಲಿ ಯಾರಿಗೂ ಬೆಡ್ ಇಲ್ಲ ಎಂದು ವಾಪಸ್ ಕಳಿಸುವಂತಿಲ್ಲ ಎಂದು ಸರ್ಕಾರ ಸೂಚನೆ ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.
ಪೌರಕಾರ್ಮಿಕ ಮಹಿಳೆ ಸಾವು..!
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವಿ.ನಾಗೇನಹಳ್ಳಿ ವಾರ್ಡ್‍ನ ಪೌರಕಾರ್ಮಿಕ ಮಹಿಳೆಗೂ ಇದೆ ಸ್ಥಿತಿ ಆಗಿದೆ. ಚಿಕಿತ್ಸೆಗೆಂದು ಹಲವು ಆಸ್ಪತ್ರೆಗಳಿಗೆ ತಿರುಗಿದರೂ ಯಾವ ಆಸ್ಪತ್ರೆಗಳಲ್ಲೂ ಬೆಡ್ ಇಲ್ಲ ಎಂದು ಸತಾಯಿಸಿದ ಪರಿಣಾಮ ಆಕೆ ಜೀವ ಬಿಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೆಲ್ಲಾ ನೋಡಿದರೆ ಬೆಂಗಳೂರು ನಗರದಲ್ಲಿ ಕೊರೊನಾದಿಂದ ಮುಂದಿನ ದಿನಗಳು ಎಷ್ಟೊಂದು ಭಯಾನಕ ಆಗಲಿವೆ ಎಂಬುದರ ಸೂಚನೆಯಾಗಿದೆ ಎಂದರೆ ತಪ್ಪೇನಿಲ್ಲ.








