ಬೆಂಗಳೂರು: ವ್ಯಕ್ತಿಯೊಬ್ಬ ಗಂಡನಿಂದ ದೂರವಿದ್ದ 2 ಮಕ್ಕಳ ತಾಯಿಯನ್ನು ನಂಬಿಸಿ ಬಾಳು ಕೊಡುತ್ತೇನೆಂದು ಹೇಳಿ ಈಗ ಕೈ ಕೊಟ್ಟಿರುವ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಜ್ವಲ್ ವಿರುದ್ಧ ನಗರದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ (Kengeri Police Station) ದೂರು ದಾಖಲಾಗಿದೆ. ಪತಿ ಹಲ್ಲೆ ಮಾಡುತ್ತಿದ್ದ ಕಾರಣಕ್ಕೆ ಕಳೆದ 13 ವರ್ಷಗಳಿಂದ ಆತನನ್ನು ಬಿಟ್ಟು, ತವರು ಮನೆಯಿಂದಲೂ ದೂರವಾಗಿ ಮಹಿಳೆಯೊಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಇತ್ತೀಚೆಗೆ 8 ತಿಂಗಳ ಹಿಂದೆ ಬೆಂಗಳೂರಿಗೆ ಬಂದು, ಜೀವನೋಪಾಯಕ್ಕಾಗಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಆನಂತರ ಬೇಸರ ಕಳೆಯುವುದಕ್ಕಾಗಿ ಮಹಿಳೆ ರೀಲ್ಸ್ ಮಾಡಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ವಂಚಕ ಪ್ರಜ್ವಲ್ ನ ಪರಿಚಯವಾಗಿದೆ.
ಈತ ಮಹಿಳೆ ಮಾಡುತ್ತಿದ್ದ ಪ್ರತಿ ರೀಲ್ಸ್ ಗೂ ಹಾರ್ಟ್ ಎಮೋಜಿ ಹಾಕುತ್ತಿದ್ದ. ಈ ವೇಳೆ ಇಬ್ಬರಿಗೂ ಪರಿಚಯವಾಗಿ ಕೊನೆಗೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಮಹಿಳೆಗೆ ಮದುವೆಯಾಗಿರುವ ವಿಚಾರ ಗೊತ್ತಿದ್ದರೂ ಬಾಳು ಕೊಡುತ್ತೇನೆ ಎಂದು ಹೇಳಿ ನಂಬಿಸಿದ್ದಾನೆ. ಶ್ರಾವಣ ಮಾಸದ ನಂತರ ಮದುವೆಯಾಗುವ ಭರವಸೆ ನೀಡಿದ್ದಾನೆ. ಆಕೆಯೊಂದಿಗೆ 3 ತಿಂಗಳು ಗುಟ್ಟಾಗಿ ಸಂಸಾರ ಕೂಡ ಮಾದಿದ್ದಾನೆ. ಮಕ್ಕಳನ್ನೂ ಚೆನ್ನಾಗಿ ನೋಡಿಕೊಂಡಿದ್ದಾನೆ. ಆನಂತರ ಮಹಿಳೆಯಿಂದ ದೂರವಾಗಲು ಯತ್ನಿಸಿದ್ದಾನೆ.
ಈಗ ಪ್ರಜ್ವಲ್ ಬೇಕು ಎಂದು ಪಟ್ಟು ಹಿಡಿದಿರುವ ಮಹಿಳೆ ಮದುವೆಯಾಗಲಿಲ್ಲ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಪಟ್ಟು ಹಿಡಿದಿದ್ದಾರೆ. ಈ ಕುರಿತು ಮಹಿಳೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.