ಶಿವಮೊಗ್ಗ : ಭಾರತ ತಾನಾಗಿಯೇ ಯಾರ ಸುದ್ದಿಗೂ ಹೋಗುವುದಿಲ್ಲ. ಆದರೆ, ಭಾರತದ ತಂಟೆಗೆ ಯಾರಾದರೂ ಬಂದರೆ, ಸುಮ್ಮನಿರುವುದಿಲ್ಲ. ಒಂದು ವೇಳೆ ಚೀನಾ ಯುದ್ಧಕ್ಕೆ ಬಂದರೆ, ಭಾರತ ತಕ್ಕ ಪಾಠ ಕಲಿಸಲಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಚೀನಾ-ಭಾರತ ಸೈನಿಕರ ಘರ್ಷಣೆ ಬಗ್ಗೆ ಮಾತನಾಡಿದ ಅವರು, ಗಡಿ ಭಾಗದಲ್ಲಿ ನಮ್ಮ ಸೈನಿಕರನ್ನು ಚೀನಿ ಸೈನಿಕರು ಹತ್ಯೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ನಮ್ಮ ಸೈನಿಕರೂ ಚೀನಿ ಸೈನಿಕರುನ್ನು ಹತ್ಯೆ ಮಾಡಿದ್ದಾರೆ. ಇನ್ನು ತನ್ನ ಮೇಲಿರುವ ಕೊರೊನಾ ಆರೋಪವನ್ನು ಮರೆಮಾಚಲು ಚೀನಾ ಇಂತಹ ಕೆಲಸ ಮಾಡಿದೆ. ಭಾರತ ಇನ್ನು ಮುಂದೆ ಚೀನಾದ ಉತ್ಪನ್ನಗಳನ್ನು ಖರೀದಿಸದಿರಲು ತೀರ್ಮಾನಿಸಿದ್ದರಿಂದ ಚೀನಾಗೆ ಗಾಬರಿ ಹುಟ್ಟಿಸಿರಬಹುದು. ಸದ್ಯ ಚೀನಾ ಗಡಿಯಲ್ಲಿ ಭಾರತ ಸುಸಜ್ಜಿತ ರಸ್ತೆ ನಿರ್ಮಿಸಿದ್ದರಿಂದ ಭಾರತ ಯುದ್ಧಕ್ಕಾಗಿ ಈ ರಸ್ತೆ ನಿರ್ಮಿಸಿದೆ ಎಂದು ಚೀನಾ ಭಾವಿಸಿರಬಹುದು. ಭಾರತ ಯಾವತ್ತೂ ತಾನಾಗಿಯೇ ಯಾವುದೇ ದೇಶದ ಮೇಲೆ ಯುದ್ಧಕ್ಕೆ ಹೋದ ಉದಾಹರಣೆ ಇಲ್ಲ ಎಂದು ತಿಳಿಸಿದರು.
ಇನ್ನು ಭಾರತೀಯ ಸೈನಿಕರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಹೀಗಾಗಿ ಸೈನಿಕರ ಆತ್ಮಸ್ಥೈರ್ಯ ಹೆಚ್ಚಾಗಿದೆ. ಭಾರತ ತಾನಾಗಿಯೇ ಯಾರ ಸುದ್ದಿಗೂ ಹೋಗುವುದಿಲ್ಲ. ಆದರೆ, ಭಾರತದ ತಂಟೆಗೆ ಯಾರಾದರೂ ಬಂದರೆ, ಸುಮ್ಮನಿರುವುದಿಲ್ಲ ಎಂಬುದು ಚೀನಾ ಹಾಗೂ ಪಾಕಿಸ್ತಾನಕ್ಕೆ ಗೊತ್ತಿದೆ. ಚೀನಾ ಒಬ್ಬಂಟಿಯಾಗಿದೆ. ನಮ್ಮ ದೇಶದೊಂದಿಗೆ ವಿಶ್ವದ ಎಲ್ಲ ದೇಶಗಳೂ ಇವೆ. ಒಂದು ವೇಳೆ ಚೀನಾ ಯುದ್ಧಕ್ಕೆ ಬಂದರೆ, ಭಾರತ ತಕ್ಕ ಪಾಠ ಕಲಿಸಲಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.