ತಿರುಪತಿ ಬೆಟ್ಟದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮೆಟ್ಟಿಲು ಮಾರ್ಗದಲ್ಲಿ ತೆರಳುವ ಪಾದಯಾತ್ರಿಗಳಿಗೆ ಮಹತ್ವದ ಸೂಚನೆ ನೀಡಲಾಗಿದೆ.
ಈ ಭಕ್ತಾದಿಗಳಿಗೆ ಚಿರತೆ ದಾಳಿಯ ಭೀತಿ ಎದುರಾಗಿದ್ದು, ದಾರಿಯುದ್ದಕ್ಕೂ 500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಹಾಗೂ ಪಾದಯಾತ್ರಿಕರಿಗೆ ಬಿಗಿ ಭದ್ರತೆ ಒದಗಿಸಲು ಟಿಟಿಡಿ ನಿರ್ಧರಿಸಿದೆ.
ಇತ್ತೀಚೆಗಷ್ಟೇ 6 ವರ್ಷದ ಬಾಲಕಿಯೊಬ್ಬಳನ್ನು ಚಿರತೆ ಹೊತ್ತೊಯ್ದು ಕೊಂದ ಬೆನ್ನಲ್ಲಿಯೇ ಟಿಟಿಡಿ ಈ ನಿರ್ಧಾರ ಕೈಗೊಂಡಿದೆ. ತಿರುಮಲ ಬೆಟ್ಟದ ಬುಡದಿಂದ ತುದಿಯವರೆಗೆ ಗಾಳಿ ಗೋಪುರದಿಂದ ಲಕ್ಷ್ಮಿನರಸಿಂಹ ದೇಗುಲದವರೆಗೆ ಚಿರತೆ ದಾಳಿ ತಡೆಯಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಜೊತೆಗೂಡಿ ನಿರ್ಧರಿಸಿದೆ.
ಬೆಟ್ಟಹತ್ತುವ ಪ್ರತಿ 100 ಯಾತ್ರಿಕರ ಗುಂಪಿನ ಜೊತೆ ಒಬ್ಬ ಸೆಕ್ಯುರಿಟಿ ಗಾರ್ಡ್ ಇರಲಿದ್ದಾರೆ. ಈಗಾಗಲೇ 30 ಟಿಟಿಡಿ ಸೆಕ್ಯುರಿಟಿ ಗಾರ್ಡ್ ಹಾಗೂ 10 ಅರಣ್ಯ ಇಲಾಖೆಯ ಗಾರ್ಡ್ಗಳನ್ನು ಈ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬಾಲಕಿಯನ್ನು ಚಿರತೆ ಹೊತ್ತೊಯ್ದ ಘಟನೆ ಹಾಗೂ ಅದಕ್ಕೂ ಮುನ್ನ ಜೂನ್ 21ರಂದು ಪುಟ್ಟ ಬಾಲಕನೊಬ್ಬನ ಮೇಲೆ ಚಿರತೆ ದಾಳಿ ನಡೆಸಿತ್ತು. ಹೀಗಾಗಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.








