ಇಮ್ರಾನ್ ಖಾನ್ ದ್ವೇಷದ ಭಾಷಣ – ಯಾವುದೇ ಸಮಯದಲ್ಲಿ ಬಂಧನ ಸಾಧ್ಯತೆ…
ಶನಿವಾರ ರಾತ್ರಿ ಭಾಷಣದ ವೇಳೆ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ಪೊಲೀಸರು ಮತ್ತು ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದಾರೆ. ಇದಾದ ನಂತರ, ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (PEMRA) ತಕ್ಷಣವೇ ಇಮ್ರಾನ್ ಖಾನ್ ಅವರ ಭಾಷಣಗಳ ನೇರ ಪ್ರಸಾರವನ್ನ ತಡೆಹಿಡಿದಿದೆ. ಪೊಲೀಸರು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಯಾವುದೇ ಸಮಯದಲ್ಲಿ ಬಂಧಿಸಬಹುದು.
PEMRA ಪ್ರಕಾರ- ಇಮ್ರಾನ್ ಖಾನ್ ಸಂವಿಧಾನದ 19 ನೇ ವಿಧಿಯನ್ನು ಉಲ್ಲಂಘಿಸಿದ್ದಾರೆ. ಇಮ್ರಾನ್ ಖಾನ್ ಅವರು ದೇಶದ ಸೇನೆ, ಪೊಲೀಸ್ ಮತ್ತು ನ್ಯಾಯಾಂಗದ ವಿರುದ್ಧ ನಿರಂತರವಾಗಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಭಾಷಣಗಳು ದ್ವೇಷವನ್ನು ಹರಡುತ್ತಿವೆ ಎನ್ನಲಾಗಿದೆ.
ಇಮ್ರಾನ್ ಹೇಳಿದ್ದೇನು?
ಆಗಸ್ಟ್ 20 ರಂದು ಇಸ್ಲಾಮಾಬಾದ್‌ನ ಎಫ್9 ಪಾರ್ಕ್‌ನಲ್ಲಿ ಆಯೋಜಿಸಲಾದ ರ್ಯಾಲಿಯಲ್ಲಿ ಮಾತನಾಡಿದ ಇಮ್ರಾನ್ ಆಪ್ತ ಶಹಬಜ್ ಗಿಲ್ ಆವರ ಬಂಧನದ ಕುರಿತು ಪೊಲೀಸರ ವಿರುದ್ದ ಆರೋಪಗಳ ಸುರಿಮಳೆಗೈದಿದ್ದಾರೆ.
ಮಹಿಳಾ ನ್ಯಾಯಾಧೀಶರಿಗೂ ಬೆದರಿಕೆ
ಅಷ್ಟೇ ಅಲ್ಲದೆ, ಮಹಿಳಾ ನ್ಯಾಯಾಧೀಶರು ತಮ್ಮ ಪಕ್ಷದ ವಿರುದ್ಧ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. “ನ್ಯಾಯಾಂಗ ಸಹ ಮುಂದಿನ ಪರಿಣಾಮಗಳಿಗೆ ತನ್ನನ್ನು ತಾನೇ ಸಿದ್ಧಪಡಿಸಿಕೊಳ್ಳಬೇಕು. ಗಿಲ್ ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದ ಮಹಿಳಾ ನ್ಯಾಯಾಧೀಶರಿಗೂ ಖಾನ್ ಬೆದರಿಕೆ ಹಾಕಿದ್ದು, ನ್ಯಾಯಾಧೀಶರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಶಹಬಾಜ್ ಗಿಲ್ ಇಮ್ರಾನ್ ಅವರ ಆಪ್ತ ಸ್ನೇಹಿತ
ಆಗಸ್ಟ್ 9 ರಂದು ಶಹಬಾಜ್ ಗಿಲ್ ಅವರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ವೇಳೆ ಗಿಲ್ ಐಷಾರಾಮಿ ಕಾರಿನಲ್ಲಿ ಇಮ್ರಾನ್ ಅವರ ಮನೆ ಬನಿಗಾಲಕ್ಕೆ ತೆರಳುತ್ತಿದ್ದರು. ಗಿಲ್ ಈ ಹಿಂದೆ ಪಾಕಿಸ್ತಾನಿ ಸೇನೆ ಮತ್ತು ನ್ಯಾಯಾಂಗದ ಬಗ್ಗೆ ಅತ್ಯಂತ ಕಳಪೆ ಹೇಳಿಕೆಗಳನ್ನ ನೀಡಿದ್ದರು. ಇದು ಸೇನೆ ಮತ್ತು ಸರ್ಕಾರವನ್ನು ಕೆರಳಿಸಿತು. ಹೀಗಾಗಿ ಆತನನ್ನು ಬಂಧಿಸಲಾಗಿದೆ.
ವರದಿಗಳ ಪ್ರಕಾರ, ಇಮ್ರಾನ್ ಖಾನ್ ಅವರಿಗೆ 3 ನೋಟಿಸ್ ನೀಡಿದ ನಂತರ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಶುಕ್ರವಾರ ಎರಡನೇ ನೋಟಿಸ್ ನೀಡಲಾಗಿದೆ. ‘ಜಿಯೋ ನ್ಯೂಸ್’ ಪ್ರಕಾರ, ಇಮ್ರಾನ್ ಬಂಧನಕ್ಕಾಗಿ ಪಾಕಿಸ್ತಾನದ ಗಣ್ಯ ಭದ್ರತಾ ಘಟಕ ರೇಂಜರ್‌ಗಳನ್ನು ಅಲರ್ಟ್ ಮಾಡಲಾಗಿದೆ.