ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಸೋಲಿನ ಆಘಾತ ಕಂಡಿರುವ ಟೀಂ ಇಂಡಿಯಾ, ಇದೀಗ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಯುವ ಆಟಗಾರರ ಬಲದೊಂದಿಗೆ ಆಸೀಸ್ ಸವಾಲು ಎದುರಿಸಲಿರುವ ಭಾರತ ತಂಡಕ್ಕೆ ಈ ಸರಣಿ ಮುಂಬರುವ 2024ರ ಟಿ20 ವಿಶ್ವಕಪ್ ತಯಾರಿಯ ಮೊದಲ ಹೆಜ್ಜೆಯಾಗಿದೆ. ಈ ಸರಣಿಯಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವ ಪರಿಣಾಮ ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಹೀಗಾಗಿ ಆಸೀಸ್ ವಿರುದ್ಧದ ಸರಣಿಯಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರರು ತಮ್ಮ ಛಾಪು ಮೂಡಿಸುವ ಲೆಕ್ಕಾಚಾರದಲ್ಲಿದ್ದಾರೆ. ಪ್ರಮುಖವಾಗಿ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿರುವ ಸೂರ್ಯಕುಮಾರ್ ಯಾದವ್ ಅವರ ಮೇಲೆ ದೊಡ್ಡಮಟ್ಟದ ನಿರೀಕ್ಷೆ ಹೊಂದಲಾಗಿದೆ.
ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಸಾಕಷ್ಟು ಟೀಕೆಗಳಿಗೆ ಸೂರ್ಯಕುಮಾರ್ ಗುರಿಯಾಗಿದ್ದರು. ಈ ನಡುವೆ ಆಸೀಸ್ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆಯುವ ಜೊತೆಗೆ ನಾಯಕತ್ವದ ಜವಾಬ್ದಾರಿಯನ್ನ ಕೂಡ ನೀಡಲಾಗಿದೆ. ಹೀಗಾಗಿ ನಂ.1 ಟಿ20 ಬ್ಯಾಟರ್ ಎನಿಸಿರುವ ಸೂರ್ಯಕುಮಾರ್ ಪ್ರದರ್ಶನದ ಬಗ್ಗೆ ಎಲ್ಲರ ಗಮನ ನೆಟ್ಟಿದೆ. ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಸೂರ್ಯ, ಆಸೀಸ್ ವಿರುದ್ಧ ನಿರೀಕ್ಷಿತ ಯಶಸ್ಸು ಸಾಧಿಸುತ್ತಾರಾ? ಎಂಬ ಕುತೂಹಲ ಮೂಡಿದೆ.
ಇವರೊಂದಿಗೆ ಶ್ರೇಯಸ್ ಅಯ್ಯರ್‌ಗೂ ಕೂಡ ಈ ಸರಣಿ ಮಹತ್ವದ್ದಾಗಿದೆ. ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶ್ರೇಯಸ್, ಪ್ರದರ್ಶನದ ಮೇಲೂ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ. ಈ ಇಬ್ಬರು ಪ್ರಮುಖ ಆಟಗಾರರ ಜೊತೆಗೆ ಯುವ ಬ್ಯಾಟರ್‌ಗಳಾದ ರಿಂಕು ಸಿಂಗ್, ತಿಲಕ್ ವರ್ಮ, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಅವರಿಗೂ ಆಸೀಸ್ ವಿರುದ್ಧದ ಸರಣಿ ಮಹತ್ವದ್ದಾಗಿದೆ. ಬ್ಯಾಟರ್‌ಗಳ ಜೊತೆಗೆ ಯುವ ಬೌಲರ್‌ಗಳಿಗೂ ಈ ಸರಣಿಯಲ್ಲಿನ ಪ್ರದರ್ಶನ ದೊಡ್ಡಮಟ್ಟದ ಲಾಭವಾಗಲಿದೆ. ಪ್ರಮುಖವಾಗಿ ವೇಗದ ಬೌಲರ್‌ಗಳಾದ ಅರ್ಶದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಶಿವಂ ದುಬೆ, ರವಿ ಬಿಷ್ಣೋಯಿ ಅವರುಗಳ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ.
IND v AUS, Team India, Australia, Suryakumar Yadav, T20I Series