ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ “ಹಿಟ್‌ಮ್ಯಾನ್” ಖ್ಯಾತಿಯ ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ನಲ್ಲಿ ಅತ್ಯಧಿಕ ಸಿಕ್ಸ್‌ಗಳನ್ನ ಬಾರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಸದ್ದು ಮಾಡಿರುವ ರೋಹಿತ್ ಶರ್ಮಾ, ಏಕದಿನ ವಿಶ್ವಕಪ್‌ನಲ್ಲೂ ಭರ್ಜರಿ ಬ್ಯಾಟಿಂಗ್‌ನಿಂದ ಅಬ್ಬರಿಸಿದ್ದಾರೆ. ಪ್ರತಿ ಪಂದ್ಯದಲ್ಲೂ ಆಕ್ರಮಣಕಾರಿ ಬ್ಯಾಟಿಂಗ್‌ನ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಪ್ರಾಬಲ್ಯ ಮೆರೆಯುವ ಹಿಟ್‌ಮ್ಯಾನ್, ಇದೀಗ ಏಕದಿನ ವಿಶ್ವಕಪ್‌ನಲ್ಲಿ ಅತ್ಯಧಿಕ ಸಿಕ್ಸರ್‌ಗಳನ್ನ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಲಿಸ್ಟ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.
ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಜಿ಼ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ 4ನೇ ಸಿಕ್ಸರ್ ಸಿಡಿಸುವ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಸಿಕ್ಸ್‌ಗಳನ್ನ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಬರೆದು ಮಿಂಚಿದರು. ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದ ಆರಂಭಕ್ಕೂ ಮುನ್ನ 47 ಸಿಕ್ಸ್‌ಗಳನ್ನ ಬಾರಿಸಿ ಹೆಚ್ಚು ಸಿಕ್ಸ್‌ಗಳನ್ನ ಬಾರಿಸಿದ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿದ್ದರೆ. ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಕ್ರಿಸ್ ಗೇಯ್ಲ್ 49 ಸಿಕ್ಸ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರು.
ಆದರೆ ಕಿವೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಹಿಟ್‌ಮ್ಯಾನ್ ರೋಹಿತ್, 27 ಇನ್ನಿಂಗ್ಸ್‌ಗಳಲ್ಲಿ 51 ಸಿಕ್ಸ್‌ಗಳ ಗಡಿದಾಟುವ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಅತ್ಯಧಿಕ ಸಿಕ್ಸ್‌ಗಳನ್ನ ಬಾರಿಸಿದ ಮೊದಲ ಬ್ಯಾಟರ್ ಎನಿಸಿದರು. ಅಲ್ಲದೇ ಪ್ರಸಕ್ತ ವಿಶ್ವಕಪ್-2023 ಟೂರ್ನಿಯಲ್ಲಿ 10 ಇನ್ನಿಂಗ್ಸ್‌ಗಳಲ್ಲಿ 28 ಸಿಕ್ಸ್‌ಗಳನ್ನ ಸಿಡಿಸುವ ಮೂಲಕ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ, ಕೇವಲ 29 ಬಾಲ್‌ಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸ್‌ಗಳ ನೆರವಿನೊಂದಿಗೆ 47 ರನ್‌ಗಳಿಸಿ ಮಿಂಚಿದರು. ಅಲ್ಲದೇ ಶುಭ್ಮನ್ ಗಿಲ್ ಜೊತೆಗೂಡಿ ಮೊದಲ ವಿಕೆಟ್‌ಗೆ 71 ರನ್‌ಗಳ ಅತ್ಯುತ್ತಮ ಆರಂಭ ನೀಡಿದರು.
ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಸಿಕ್ಸ್‌ಗಳು:
ರೋಹಿತ್ ಶರ್ಮಾ – 51 ಸಿಕ್ಸ್, 27 ಇನ್ನಿಂಗ್ಸ್
ಕ್ರಿಸ್ ಗೇಯ್ಲ್ – 49 ಸಿಕ್ಸ್, 34 ಇನ್ನಿಂಗ್ಸ್
ಗ್ಲೆನ್ ಮ್ಯಾಕ್ಸ್‌ವೆಲ್ – 43 ಸಿಕ್ಸ್, 23 ಇನ್ನಿಂಗ್ಸ್
ಎಬಿ ಡಿವಿಲಿಯರ್ಸ್ – 37 ಸಿಕ್ಸ್, 22 ಇನ್ನಿಂಗ್ಸ್
ಡೇವಿಡ್ ವಾರ್ನರ್ – 37 ಸಿಕ್ಸ್, 27 ಇನ್ನಿಂಗ್ಸ್
IND v NZ, Rohit Sharma, Team India, Hitman, Most Sixes, ODI World Cup