ನ್ಯೂಜಿ಼ಲೆಂಡ್ ವಿರುದ್ಧ ನಡೆದ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಅವರ 50ನೇ ಏಕದಿನ ಶತಕದ ಅಬ್ಬರದ ನಡುವೆಯೂ ಆಕ್ರಮಣಕಾರಿ ಬೌಲಿಂಗ್ ಮೂಲಕ ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿ ಮಿಂಚಿದ ಮೊಹಮ್ಮದ್ ಶಮಿ, ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.
ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(117) ಅದ್ಭುತ ಶತಕ ಬಾರಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 50ನೇ ಶತಕ ಸಿಡಿಸಿ ದಾಖಲೆ ನಿರ್ಮಿಸಿದರೆ. ವೇಗದ ಬೌಲರ್ ಮೊಹಮ್ಮದ್ ಶಮಿ(7/87) ಅದ್ಭುತ ಬೌಲಿಂಗ್‌ನಿಂದ ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿಯುವ ಜೊತೆಗೆ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ತಮ್ಮ ಈ ಪ್ರದರ್ಶನದೊಂದಿಗೆ ಭಾರತದ “ಪೇಸ್ ಸೆನ್ಸೇಷನ್” ಆಗಿರುವ ಮೊಹಮ್ಮದ್ ಶಮಿ, ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಭಾರತದ ಪರ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರು. ಇದರೊಂದಿಗೆ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ(6/23) 2003ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮಾಡಿದ್ದ ದಾಖಲೆಯನ್ನ ಮುರಿದರು. ಕಿವೀಸ್ ವಿರುದ್ಧ ಮೊಹಮ್ಮದ್ ಶಮಿ ನೀಡಿದ ಪ್ರದರ್ಶನ ಏಕದಿನ ವಿಶ್ವಕಪ್‌ನ 5ನೇ ಬೆಸ್ಟ್ ಬೌಲಿಂಗ್ ಪ್ರದರ್ಶನವಾಗಿದೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೆನ್ ಮೆಗ್ರಾತ್(7/15) 2003ರಲ್ಲಿ ನಮೀಬಿಯಾ ವಿರುದ್ಧ ನೀಡಿರುವ ಪ್ರದರ್ಶನ ಈವರೆಗಿನ ಶ್ರೇಷ್ಠ ಪ್ರದರ್ಶನವಾಗಿದೆ.
ಅಷ್ಟೇ ಅಲ್ಲದೇ ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರ ಏಕದಿನ ವಿಶ್ವಕಪ್ ದಾಖಲೆಯನ್ನ ಸಹ ಮುರಿದಿದ್ದಾರೆ. ಒಂದು ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚು ವಿಕೆಟ್‌ಗಳನ್ನ ಪಡೆದ ಭಾರತದ ಬೌಲರ್‌ಗಳ ಪೈಕಿ ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್, 2011ರಲ್ಲಿ ಭಾರತ ವಿಶ್ವಕಪ್ ಗೆದ್ದ ಆವೃತ್ತಿಯಲ್ಲಿ 21 ವಿಕೆಟ್ ಪಡೆದಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಪ್ರಸಕ್ತ ವಿಶ್ವಕಪ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನ ಪಡೆದಿರುವ ಶಮಿ, ಈ ದಾಖಲೆಯನ್ನ ಸಹ ಮುರಿದಿದ್ದಾರೆ.
ಕಿವೀಸ್ ವಿರುದ್ಧ 7 ವಿಕೆಟ್‌ಗಳನ್ನ ಪಡೆದು ಮಿಂಚಿದ ಮೊಹಮ್ಮದ್ ಶಮಿ, ಆ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಒಟ್ಟಾರೆ 4ನೇ ಬಾರಿಗೆ ಐದು ವಿಕೆಟ್‌ಗಳನ್ನ ಪಡೆದಿದ್ದಾರೆ. ಪ್ರಸಕ್ತ ವಿಶ್ವಕಪ್ ಆವೃತ್ತಿಯಲ್ಲೇ ಮೂರನೇ ಬಾರಿಗೆ 5 ವಿಕೆಟ್‌ಗಳನ್ನ ಪಡೆದಿರುವ ಶಮಿ, ಈ ಹಿಂದೆ 2019ರ ವಿಶ್ವಕಪ್ ಆವೃತ್ತಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ 5 ವಿಕೆಟ್‌ಗಳನ್ನ ಪಡೆದಿದ್ದರು. ಈ ಪ್ರದರ್ಶನದೊಂದಿಗೆ ಆಸೀಸ್‌ನ ಪ್ರಮುಖ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನ ಸಹ ಮುರಿದಿದ್ದಾರೆ. ಅಲ್ಲದೇ ಟೀಂ ಇಂಡಿಯಾದ ಅನುಭವಿ ವೇಗಿ ಶಮಿ, ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ 50 ವಿಕೆಟ್‌ಗಳ ಮೈಲಿಗಲ್ಲು ದಾಟಿದರು. ನ್ಯೂಜಿ಼ಲೆಂಡ್ ವಿರುದ್ಧದ ಪ್ರದರ್ಶನದೊಂದಿಗೆ ಶಮಿ, 17 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್‌ಗಳ ಗಡಿದಾಟುವ ಮೂಲಕ ವೇಗವಾಗಿ ಈ ಸಾಧನೆ ಮಾಡಿರುವ ಬೌಲರ್ ಎನಿಸಿದರು.
IND v NZ, Team India, Mohammed Shami, ODI World Cup,