IND vs AUS Series : ಭಾರತ ಪ್ರವಾಸಕ್ಕೆ 18 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ..!!
IND vs AUS Series : ಭಾರತ ಪ್ರವಾಸಕ್ಕೆ 18 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ
ಟೀಂ ಇಂಡಿಯಾ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಾಗಿ ಆಸ್ಟ್ರೇಲಿಯಾ ತಂಡ 18 ಆಟಗಾರರ ತಂಡವನ್ನು ಪ್ರಕಟಿಸಿದ್ದು, ಉಭಯ ತಂಡಗಳ ನಡುವಿನ ಸರಣಿ ಫೆಬ್ರವರಿ 9ರಂದು ಪ್ರಾರಂಭವಾಗಲಿದೆ.
ಭಾರತ ಪ್ರವಾಸ ಕೈಗೊಳ್ಳಲಿರುವ ಕಾಂಗರೂ ಪಡೆ ಭಾರತದ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನಾಡಲಿದೆ. ಪ್ರಮುಖವಾಗಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಗೆ ತಂಡವನ್ನ ಪ್ರಕಟಿಸಿರುವ ಆಸೀಸ್, ನಾಲ್ವರು ಸ್ಪಿನ್ನರ್‌ಗಳನ್ನ ತಂಡದಲ್ಲಿ ಸೇರಿಸಿಕೊಂಡಿದೆ.
ಉದಯೋನ್ಮುಖ ತಾರೆ ಟಾಡ್ ಮರ್ಫಿ, ಮಿಚೆಲ್ ಸ್ವೆಪ್ಸನ್ ಮತ್ತು ಆಷ್ಟನ್ ಅಗರ್ ಅವರೊಂದಿಗೆ ನಾಥನ್ ಲಿಯಾನ್ ಅವರ ಸ್ಪಿನ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೂ 2019ರ ಜನವರಿ ಬಳಿಕ ಪೀಟರ್ ಹ್ಯಾಡ್ಸ್‌ಕಾಂಬ್ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಉಳಿದಂತೆ ರಿಸರ್ವ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಮ್ಯಾಟ್ ರೆನ್‌ಶಾ ಸೇರಿದ್ದರೆ, ಮಾರ್ಕಸ್ ಹ್ಯಾರಿಸ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಆದರೆ ಆಸೀಸ್‌ನ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ನಾಗ್ಪುರದಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದ ನಂತರ ತಂಡಕ್ಕೆ ಮರಳಲಿದ್ದಾರೆ. ಹೀಗಾಗಿ ಅನ್‌ಕ್ಯಾಪ್ಡ್ ವೇಗದ ಲ್ಯಾನ್ಸ್ ಮೋರಿಸ್ ತಂಡದಲ್ಲಿ ಸ್ಥಾನ ಪಡೆದಿದ್ದು, ಸ್ಟಾರ್ಕ್ ಅನುಪಸ್ಥಿತಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಗಾಯಗೊಂಡ ನಂತರ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯ ಆರಂಭಿಕ ಟೆಸ್ಟ್‌ಗೆ ಫಿಟ್ ಆಗಲು ಕಸರತ್ತು ನಡೆಸುತ್ತಿದ್ದಾರೆ.
ಯುವ ಸ್ಪಿನ್ನರ್ ಮರ್ಫಿ ಕಳೆದ ವರ್ಷ ವಿಕ್ಟೋರಿಯಾ, ಆಸ್ಟ್ರೇಲಿಯಾ ಎ ಮತ್ತು ಪ್ರೈಮ್ ಮಿನಿಸ್ಟರ್ಸ್ XI ತಂಡಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ತಂಡಕ್ಕೆ ವಾಪಸ್ಸಾಗಿದ್ದಾರೆ.
ಉಳಿದಂತೆ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ ಹಾಗೂ ಸ್ಟೀವ್ ಸ್ಮಿತ್ ಕಾಣಿಸಿಕೊಂಡಿದ್ದಾರೆ.
ಭಾರತ ಪ್ರವಾಸಕ್ಕಾಗಿ ಆಸ್ಟ್ರೇಲಿಯಾ ಟೆಸ್ಟ್ ತಂಡ : ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕೆಮರೂನ್ ಗ್ರೀನ್, ಪೀಟರ್ ಹ್ಯಾಂಡ್ಸ್ಕಾಂಬ್, ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಗ್ನೆ, ನಾಥನ್ ಲಿಯಾನ್, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.
IND vs AUS Series : Australia announce team members








