ಬೆಂಗಳೂರು: ಭಾರತ ತಂಡವು ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಹೀನಾಯವಾಗಿ ಸೋಲಿಸಿದೆ. ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ವಿಶ್ವಕಪ್ (ICC World Cup) ಕ್ರಿಕೆಟ್ ಟೂರ್ನಿಯಲ್ಲಿ 20 ವರ್ಷಗಳ ನಂತರ ಸತತ 8 ಏಕದಿನ ಪಂದ್ಯಗಳನ್ನು ಗೆದ್ದ ಸಾಧನೆಯನ್ನು ಭಾರತ ಮಾಡಿದೆ. ಈ ಹಿಂದೆ ಭಾರತ ತಂಡವು 2003ರಲ್ಲಿ ಸತತ 8 ಪಂದ್ಯ ಗೆದ್ದ ದಾಖಲೆ ಬರೆದಿತ್ತು. ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಇಲ್ಲಿಯವರೆಗೆ 8 ಪಂದ್ಯಗಳನ್ನು ಆಡಿದ್ದು, ಆಡಿದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಅಗ್ರ ಸ್ಥಾನ ಕಾಯ್ದುಕೊಂಡಿದೆ.
ಭಾರತ ತಂಡದ ವಿರುದ್ಧ 243 ರನ್ ಗಳಿಂದ ಸೋತಿರುವ ದಕ್ಷಿಣ ಆಫ್ರಿಕಾ ಕಳಪೆ ದಾಖಲೆಯೊಂದನ್ನು ಮಾಡಿದೆ. ಇಂದಿನ ಸೋಲು ಬೃಹತ್ ಅಂತರದ ಸೋಲಾಗಿದೆ. 2002ರಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 182 ರನ್ ಗಳಿಂದ ಸೋಲಿಸಿತ್ತು. ಭಾರತ ತಂಡ ಇದಕ್ಕೂ ಮುನ್ನ 2010ರಲ್ಲಿ 153 ರನ್ ಗಳಿಂದ ಸೋಲಿಸಿತ್ತು. ಇದು ಭಾರತದ ಪರ ದಾಖಲೆಯಾಗಿತ್ತು. 2015ರಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 130 ರನ್ ಗಳಿಂದ ಸೋಲಿಸಿತ್ತು.
ಪ್ರಸಕ್ತ ಟೂರ್ನಿಯಲ್ಲಿ ಬಾರತ ತಂಡವು, ಮ್ಯಾಚ್ 1ರಲ್ಲಿ: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗೆಲುವು, ಮ್ಯಾಚ್ 2ರಲ್ಲಿ: ಆಫ್ಘಾನಿಸ್ತಾನ ವಿರುದ್ಧ 8 ವಿಕೆಟ್ ಗೆಲುವು, ಮ್ಯಾಚ್ 3ರಲ್ಲಿ: ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು, ಮ್ಯಾಚ್ 4ರಲ್ಲಿ ಬಾಂಗ್ಲಾದೇಶದ ವಿರುದ್ಧ 7 ವಿಕೆಟ್ ಗೆಲುವು, ಮ್ಯಾಚ್ 5ರಲ್ಲಿ: ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗೆಲುವು, ಮ್ಯಾಚ್ 6ರಲ್ಲಿ: ಇಂಗ್ಲೆಂಡ್ ವಿರುದ್ಧ 100 ರನ್ ಗೆಲುವು, ಮ್ಯಾಚ್ 7ರಲ್ಲಿ ಶ್ರೀಲಂಕಾ ವಿರುದ್ಧ 302 ರನ್ ಗೆಲುವು, ಮ್ಯಾಚ್ 8ರಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಸೆಮಿಫೈನಲ್ ಪ್ರವೇಶಿಸಿದೆ.