ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಮೇ 31ರವರೆಗೆ ವಿಸ್ತರಣೆ
ನವದೆಹಲಿ: ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಹಾರಾಟ ನಿಷೇಧವನ್ನು ಮೇ 31 ರವರೆಗೆ ವಿಸ್ತರಿಸಿ ವಾಯುಯಾನ ನಿಯಂತ್ರಕ ಡಿಜಿಸಿಎ ಪ್ರಕಟಣೆ ಹೊರಡಿಸಿದೆ. ದೇಶದಲ್ಲಿ ಕೊರೋನಾ ಸೋಂಕಿನ 2ನೇ ಅಲೆಯ ಅಬ್ಬರಿಸುತ್ತಿದ್ದು, ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಡಿಜಿಸಿಎ ಮೇ.31ರವರೆಗೆ ನಿಷೇಧವನ್ನು ಮುಂದುವರೆಸಿ ಆದೇಶಿಸಿದೆ.
ಆದರೆ ಈ ನಿರ್ಬಂಧ ವಂದೇ ಭಾರತ್ ಯೋಜನೆಯಲ್ಲಿ ಸಂಚರಿಸುವ ವಿಮಾನಗಳಿಗೆ ಹಾಗೂ ಸರಕು ವಿಮಾನ ಮತ್ತು ವಿಶೇಷ ಅನುಮತಿ ಪಡೆದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ಅಲ್ಲದೆ ಆಯ್ದ ಮಾರ್ಗಗಳಲ್ಲಿ ನಿಯಮಿತವಾಗಿ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಸಂಬಂಧಿತ ಆಡಳಿತಗಳು ಅನುಮತಿಸಬಹುದಾಗಿದೆ. ಆಯ್ದ ಮಾರ್ಗಗಳಲ್ಲಿ ಸಮರ್ಥ ಪ್ರಾಧಿಕಾರವು ಕೇಸ್-ಟು-ಕೇಸ್ ಆಧಾರದ ಮೇಲೆ ನಿಗದಿತ ಅಂತರರಾಷ್ಟ್ರೀಯ ವಿಮಾನಗಳನ್ನು ಅನುಮತಿಸಬಹುದು.
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಕಾರಣ ಕಳೆದ ಮಾರ್ಚ್ 23 ರಿಂದ ಭಾರತದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಯಾನ ಸೇವೆ ಸ್ಥಗಿತಗೊಳಿಸಲಾಗಿದೆ. ಆದರೆ ವಿಶೇಷ ಅಂತರರಾಷ್ಟ್ರೀಯ ವಿಮಾನಗಳು ಮೇ ತಿಂಗಳಿನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತು ಜುಲೈನಿಂದ ಆಯ್ದ ದೇಶಗಳೊಂದಿಗೆ ದ್ವಿಪಕ್ಷೀಯ “ಏರ್ ಬಬಲ್” ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಯುಎಸ್, ಯುಕೆ, ಯುಎಇ, ಕೀನ್ಯ, ಭೂತಾನ್ ಮತ್ತು ಫ್ರಾನ್ಸ್ ಸೇರಿದಂತೆ ಸುಮಾರು 24 ದೇಶಗಳೊಂದಿಗೆ ಭಾರತ ಏರ್ ಬಬಲ್ಸ್ ಒಪ್ಪಂದಗಳನ್ನು ರೂಪಿಸಿದೆ. ಎರಡು ದೇಶಗಳ ನಡುವಿನ ಏರ್ ಬಬಲ್ಸ್ ಒಪ್ಪಂದದಡಿಯಲ್ಲಿ, ವಿಶೇಷ ಅಂತರರಾಷ್ಟ್ರೀಯ ವಿಮಾನಗಳನ್ನು ತಮ್ಮ ವಿಮಾನಯಾನ ಸಂಸ್ಥೆಗಳು ತಮ್ಮ ತಮ್ಮ ಪ್ರಾಂತ್ಯಗಳ ನಡುವೆ ನಿರ್ವಹಿಸಬಹುದು.








